ಗಂಡೆಂಬ ಅಹಮ್ಮಿಯಾಗಲಿ, ಹೆಣ್ಣೆಂಬ ಕೀಳಿರಿಮೆಯಾಗಲಿ ಇಟ್ಟುಕೊಳ್ಳದೆ ಮುನ್ನಡೆಯಬೇಕಿದೆ.

ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು. ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ. ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ.

ಇಂದಿನ ದಿನಗಳಲ್ಲೂ ಹೆಣ್ಣನ್ನು ಅಬಲೆಯಾಗಿ ನೋಡುವ ಮನಸ್ಥಿತಿಯಿಂದ ಹೊರಬರಲು ಆಗುತ್ತಿಲ್ಲ. ಏಕೆಂದರೆ ಹೆಣ್ಣನ್ನು ನಾಜೂಕಾಗಿ, ಶೀಲವಂತೆಯಾಗಿ, ಕೋಮಲೆಯಾಗಿಯೇ ಅವಳನ್ನು ನೋಡಬಯಸುತ್ತದೆ. ಈ ದೃಷ್ಟಿಕೋನದ ಹೊರತಾಗಿ ಆಕೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ.

ಆದರೆ ಹನ್ನೆರಡನೆಯ ಶತಮಾನದ ಹೆಣ್ಣಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು ? ಎಂಬುದು ಅಚ್ಚರಿಯ ಸಂಗತಿ. ಅಪ್ಪ ಬಸವಣ್ಣನವರ ಮಡದಿ ಕೇವಲ ಬಸವನ ನೆರಳಲ್ಲ. ಆತನ ಆಜ್ಞಾಧಾರಕಳೂ ಅಲ್ಲ. ಬಸವಣ್ಣನವರ ಕಣ್ಣಲ್ಲಿ ಆಕೆ ಪೃಥ್ವಿಗಗ್ಗಳ ಚಲುವೆಯಾಗಿದ್ದರೂ ಸಹ, ನೀಲಾಂಬಿಕೆ ತಾಯಿಗೆ ಬಸವಣ್ಣನವರ ಸಾಕಷ್ಟು ಪ್ರೀತಿ ಇದ್ದರೂ ಅದು ಬಂಧನವಾಗುವ ಪ್ರೀತಿಯಲ್ಲ, ಅದು ಮೌಲೀಕ ಪ್ರೀತಿ. ಸ್ವಾತಂತ್ರ್ಯದ ಮುಕ್ತತತೆಯ ಪ್ರೀತಿ.

ಹೇಡಿ ನಾನಲ್ಲ. ಸಾಕಷ್ಟು ಕನಸುಗಳನ್ನು , ಉತ್ಸಾಹಗಳನ್ನು ಒಡಲಲ್ಲಿಟ್ಟುಕೊಂಡಿರುವ ಹೆಣ್ಣು ನಾನು. ಆದ್ದರಿಂದಲೇ ಧೈರ್ಯ ನನ್ನೊಳಡಗಿದೆ. ಕಾಮ (ಆಸೆ) ದ ಹಂಗಳಿದವಳಿಗೆ ಬಸವನ ಹಂಗು ಎನಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾಳೆ.ಭ್ರಮೆಗಳು ಕಳಚಿ ಸತ್ಯ ದೃಗೋಚರವಾದಾಗ ಭಯ ತಂತಾನೆ ಹೊರಟು ಹೋಗುತ್ತದೆ.ಬಸವಣ್ಣನವರು ತಮ್ಮ ಕೊನೆಯ ದಿನಗಳಲ್ಲಿ ಕೂಡಲಸಂಗಮದಲ್ಲಿರುತ್ತಾರೆ . ಆಗ ಬಸವಣ್ಣನವರಿಗೆ ನೀಲಾಂಬಿಕೆಯ ನೆನಪಾಗುತ್ತದೆ. ಹಡಪದ ಅಪ್ಪಣ್ಣನವರು ನೀಲಾಂಬಿಕೆ ತಾಯಿಯನ್ನು ಕರಕೊಂಡು ತಂಗಡಗಿಯವರೆಗೂ ಬರುತ್ತಾರೆ. ಆದರೆ ನೀಲಮ್ಮ ತಾಯಿ ಆಗಲೇ ಬಸವಣ್ಣನವರ ಬಯಕೆ ಕೇಳಿ , ತನ್ನಷ್ಟಕ್ಕೆ ತಾನು ನಸು ನಕ್ಕು ನೋಡು ನೋಡು ನೋಡು ನೋಡು ಲಿಂಗವೇ ಬಸವಯ್ಯ ಮಾಡಿದಾಟ ನೋಡು ಲಿಂಗವೇ ? ಎಂದು ಬಸವನೊಳಗೆ ಅಡಗಿದ ಮಡದಿ ಎಂಬ ಭ್ರಮೆಯನ್ನು ಕಿತ್ತು ಹಾಕಲು ಯತ್ನಿಸುತ್ತಾರೆ.

ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ.

ಗೊಗ್ಗವ್ವೆ ಎಂಬ ಶರಣೆಯಂತೂ ನೀಲಾಂಬಿಕೆ ತಾಯಿಯಂತೆಯೆ ಆಲೋಚಿಸಿ ವಾಸ್ತವಿಕ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತಾಳೆ. ಗಂಡು ಮೋಹಿಸಿ ಹೆಣ್ಣನ್ನು ಪ್ರಭಾವಿಸಿ ಅವಳೊಂದಿಗೆ ಇದ್ದರೆ ಅದು ಗಂಡಿನ ಒಡವೆ, ಇದೇನೋ ಸರಿ. ಆದರೆ ಹೆಣ್ಣೇ ಮೋಹಿಸಿ ಗಂಡನ್ನು ಹಿಡಿದಿಟ್ಟುಕೊಂಡರೆ ? ಒಡವೆ ಯಾರದೆನ್ನಬೇಕು ? ಎಂಬ ಪ್ರಶ್ನೆ ಹಾಕುವ ಮೂಲಕ ನಡುವೆ ಸುಳಿವ ಆತ್ಮ ಗಂಡು ಅಲ್ಲ ಹೆಣ್ಣೂ ಅಲ್ಲ ಎಂಬುದನ್ನು ನಿರೂಪಿಸಲು ಬಯಸುತ್ತಾರೆ.

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.

https://youtu.be/rpmwjfFPdlg

ಶರಣೆ ಸತ್ಯಕ್ಕ ಜಗದ ಬಹುತೇಕರ ತಿಳುವಳಿಕೆ ತುಂಬಾ ಭಿನ್ನ.‌ಮೊಲೆ ಮುಡಿ ಬಂದರೆ ಹೆಣ್ಣೆಂಬರು. ಮೀಸೆ ಕಾಸೆ ಬಂದರೆ ಗಂಡೆಂಬರು. ಇದು ಜಗದ ನೀತಿ, ಅಥವಾ ತಿಳುವಳಿಕೆ.ಹಣ್ಣು ಹಣ್ಣೇ ಆಗಿದೆ.ಯಾವುದಿದ್ದರೂ ಅದು ಮಧುರವಾಗಿರಬಲ್ಲುದು ಎಂದು ಹೇಳುವ ಮೂಲಕ ಹೆಣ್ಣು ಗಂಡು ಭಿನ್ನವೇನಲ್ಲ ಎಂದು ನಿರೂಪಿಸ ಬಯಸುತ್ತಾಳೆ.

ರಾಮಕೃಷ್ಣ ಪರಮಹಂಸರ ಸತಿ ಶಾರದಾದೇವಿ, ಮಹಾತ್ಮಗಾಂಧಿ ಅವರ ಸತಿ ಕಸ್ತೂರ ಬಾಯಿ ಬರೀ ಹೆಣ್ಣಾಗಿ ಕುಳಿತಿದ್ದರೆ ಅಭೂತಪೂರ್ವ ಅಚ್ಚರಿಗಳಾದ ಮಹಾತ್ಮ ಹಾಗೂ ಪರಮಹಂಸರು ನಮ್ಮ ನಡುವೆ ಇರುತ್ತಿರಲಿಲ್ಲ. ಬಸವಣ್ಣನವರ ವಿಚಾರ ಪತ್ನಿಯಾಗಿ ನೀಲಾಂಬಿಕೆ ಗಂಗಾಂಬಿಕೆ ನಿಲ್ಲದಿದ್ದರೆ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಲಾಗುತ್ತಿರಲಿಲ್ಲ.‌ ಬಸವಣ್ಣನವರ ಮಹಾಮನೆ ಮಹಾಮನೆಯಾಗಿ ಇರಲು ಸಾಧ್ಯವಿರಲಿಲ್ಲ. ಬಸವಣ್ಣನ ಮಹಾಮನೆಯ ಹೊಸ್ತಿಲಲ್ಲಿ ನೀಲಗಂಗಾರು ಹೊಯ್ದಾಡದ ದೀಪವಾಗಿ ಇದ್ದರೆಂತಲೆ ಬಸವ ಕಲ್ಯಾಣದಲ್ಲಿ ಅದ್ಭುತ ಕ್ರಾಂತಿ ಮಾಡಲು ಸಾಧ್ಯವಾಯಿತು.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.ಗಡ್ಡ ಮೀಸೆ ಬಂದಡೆ ಗಂಡೆಂಬರು.ನಡುವೆ ಸುಳಿವ ಆತ್ಮನುಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.

ದೈಹಿಕವಾಗಿ ಗಂಡು ಮತ್ತು ಹೆಣ್ಣುಗಳಲ್ಲಿ ವ್ಯತ್ಯಾಸ ಇದೆ. ಆದರೆ ಅವೆರಡೂ ಒಂದೇ. ಎರಡು ಜೀವಿಯೊಳಗಿರುವ ಜೀತಾತ್ಮ ಪರಮಾತ್ಮ ಭಿನ್ನ ಸ್ಚರೂಪದ್ದಲ್ಲ. ಎರಡ ಹುಟ್ಟೂ ಒಂದೆ ಬಗೆಯಾಗಿದೆ. ಒಂದೇ ಧಾತುವಿನಿಂದ ಹೆಣ್ಣು ಗಂಡು ನಿರ್ಮಾಣವಾಗಿವೆ ಅಂದ ಮೇಲೆ ಅವುಗಳ ಒಳಗಿರುವ ಶಕ್ತಿಯೂ ಭಿನ್ನ ಭಿನ್ನವಾಗಿರಲು ಹೇಗೆ ಸಾಧ್ಯ ? ಎಂಬ ಜೇಡದ ದಾಸಿಮಯ್ಯಗಳ ಪ್ರಶ್ನೆಗೆ ವಿಜ್ಞಾನವೂ ಸಹಮತಿ ವ್ಯಕ್ತ ಪಡಿಸುತ್ತದೆ. ಆದ್ದರಿಂದಲೇ ಸೊನ್ನಲಿಗೆ ಸಿದ್ದರಾಮ ಶರಣರು ಸಹ ಆಕೆಯನ್ನು ಕಪಿಲಸಿದ್ದ ಮಲ್ಲಿಕಾರ್ಜುನನಿಗೆ ಹೋಲಿಸುತ್ತಾರೆ.

ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!

 

ವಿಜ್ಞಾನ ಒಪ್ಪುವ, ವೈಚಾರಿಕರು ಸಹೃದರು ಶರಣರು ಸಂತರು ಪುರಸ್ಕರಿಸಿ ನಡೆದು ತೋರಿದ ಹಾದಿಯಲ್ಲಿ ಇಂದಿನ ಹೆಣ್ಣು ಗಂಡುಗಳು ನಡೆಯಬೇಕಿದೆ. ಗಂಡೆಂಬ ಅಹಮ್ಮಿಯಾಗಲಿ, ಹೆಣ್ಣೆಂಬ ಕೀಳಿರಿಮೆಯಾಗಲಿ ಇಟ್ಟುಕೊಳ್ಳದೆ ಮುನ್ನಡೆಯಬೇಕಿದೆ.

ನಮ್ಮ ಕಣ್ಣಿಗೆ ಕಾಣುವ ಸಚರಾಚವು ಎಲ್ಲರಿಗೂ ಸಂಬಂಧಿಸಿದ್ದು, ಅದನ್ನು ಅನುಭವಿಸುವ, ಕಾಪಾಡುವ, ಮುಂದಿನ ಪೀಳಿಗೆಗೆ ಬಿಡ್ಟುಕೊಡುವ ಪ್ರಜ್ಞೆ ಇಟ್ಟುಕೊಂಡುದ್ದೇ ಆದರೆ ಶರಣರ ಕಲ್ಯಾಣ ನಮ್ಮ ನಡುವೆಯೆ ಸೃಷ್ಟಿಯಾಗಲಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

 

3 thoughts on “ಗಂಡೆಂಬ ಅಹಮ್ಮಿಯಾಗಲಿ, ಹೆಣ್ಣೆಂಬ ಕೀಳಿರಿಮೆಯಾಗಲಿ ಇಟ್ಟುಕೊಳ್ಳದೆ ಮುನ್ನಡೆಯಬೇಕಿದೆ.

  1. ಭೌದ್ದಿಕವಾಗಿ ಗಂಡಿಗಿಂತ ಹೆಣ್ಣಿಗೆ ಹೆಚ್ಚಿನ ಜ್ಞಾನ ಶಕ್ತಿಇದೆ ಅನ್ನುವದನ್ನ ಶರಣರು ತೋರಿಸಿದರು .🙏🙏

    ಸುಂದರವಾದ ಮನಕ್ಕೆ ಮುಟ್ಟುವಂತ ಬರವಣಿಗೆ ತಮ್ಮದು ವಿಶ್ವರಾದ್ಯ ಸತ್ಯಂಪೇಟೆ ಯವರಿಗೆ ಗೌರವ ಶರಣು🙏🙏💐

  2. ಶರಣಾರ್ಥಿಗಳು.ಹೆಣ್ಣುಮಕ್ಕಳೆಲ್ಲ ಕಣ್ಣುತೆರೆದು ಓದಲೇಬೇಕು ಈ ಲೇಖನ.ನೀಲಾಂಬಿಕೆಯ ನಿಲುವು ಅಚ್ಚರಿಯನುಂಟು ಮಾಡುತ್ತದೆ.ಎಂಥ ಧೈರ್ಯ
    ಆತ್ಮವಿಶ್ವಾಸ ವೈಚಾರಿಕತೆ ನಮ್ಮನ್ನು ಬಡಿದೆಬ್ಬಿಸುತ್ತದೆ.ಗೊಗ್ಗವ್ವೆ ಸತ್ಶಕ್ಕ ಬೊಂತಾದೇವಿಯ ಇವರೆಲ್ಲ ವಿಚಾರವಂತ ಅಪರೂಪದ ಶರಣೆಯರುˌ
    ಶರಣಾರ್ಥಿಗಳು.

Leave a Reply

Your email address will not be published. Required fields are marked *

error: Content is protected !!