ಹರ್ಡೇಕರ ಮಂಜಪ್ಪನವರನ್ನು ಕಾಡಿದ ಕರ್ಮಠರು

ರಾಷ್ಟ್ರ ಪ್ರೇಮಿ, ಅನುಭಾವ ಜೀವಿ, ಶರಣರ ವಿಚಾರ ಮಾರ್ಗದ ಅನುಯಾಯಿ ಹರ್ಡೇಕರ್ ಮಂಜಪ್ಪನವರು ಲಿಂಗಾಯತನಾದುದೇ ಒಂದು ಕೌತುಕ.

ತಾಯಿ ಮಾತ್ರ ಗೊತ್ತು, ತಂದೆ ಯಾರೆಂದು ಗೊತ್ತಿಲ್ಲದ‌‌ ತಬ್ಬಲಿ. ಆರ್ಯ ಸಮಾಜದ ವಿಚಾರಗಳಿಗೆ ಮಾರು ಹೋಗಿ ಆರ್ಯಸಮಾಜದವನಾಗಬೇಕು ಎಂಬ ಹಂಬಲ‌ ಇರುವಾಗಲೇ ಬಸವಣ್ಣನವರ ವಚನಗಳು ಕೈಗೆ ಸಿಕ್ಕವು. ಇಷ್ಟಲಿಂಗವನ್ನು ಕಟ್ಟಿಕೊಂಡು ಲಿಂಗಪೂಜೆ ಮಾಡಬೇಕೆಂಬ ಹಂಬಲ.

ಆದರೆ‌ ಆಗೀನ ಕಾಲ ಈಗಿನಂತ್ತಲ್ಲ.‌ಅಂದು ಲಿಂಗಾಯತ ಧರ್ಮವನ್ನು‌ ಸಂಪೂರ್ಣ ಕರ್ಮಠರು ಆವರಿಸಿಕೊಂಡಿದ್ದರು. ಯಾರಿಗೂ‌ ಸ್ಪಷ್ಟವಾದ ಧರ್ಮ ಗೊತ್ತಿಲ್ಲದ ದಿನಗಳವು. ವಚನ ಸಾಹಿತ್ಯ ಯಾರು ಮತ್ತಾರದೋ ಜಗಲಿಯ ಮೇಲೆ‌ ಪೂಜೆಗೊಳ್ಳುತ್ತಿದ್ದ ದಿ‌ನಗಳವು.

ಇಂಥ ಸಂಧರ್ಭದಲ್ಲಿ ಲಿಂಗಾಯತ ಧರ್ಮದ ವ್ಯಾಖ್ಯಾನ ಸುಲಭವಾಗಿರಲಿಲ್ಲ. ಇಷ್ಟಲಿಂಗವನ್ನು ಯಾರಾದರೂ‌ ಕಟ್ಟಿಕೊಳ್ಳಬಹುದು ಎಂದು ಆಲೋಚನೆ ಮಾಡುವುದೆ ಸರಿಯಲ್ಲ ಎಂಬ ದಿನಗಳವು.‌ ಆದರೆ ಹರ್ಡೇಕರ ಮಂಜಪ್ಪನವರಿಗೆ ಇಷ್ಟಲಿಂಗವನ್ನು‌ ಕಟ್ಟಿಕೊಳ್ಳುವ ಬಯಕೆ.

ಈ ಹಂಬಲವನ್ನು ಈಡೇರಿಸಿಕೊಳ್ಳಲು ಮೊದಲು ಹೋದದ್ದು, ಕಂಡದ್ದು ಚಿತ್ರದುರ್ಗದ ವಿರಕ್ತ ಮಠದ ಜಗದ್ಗುರು ಜಯದೇವ ಮಹಾಸ್ವಾಮಿಗಳನ್ನು. ಆದರೆ ಆ ಗುರುಗಳೂ ಸಹ , ಹರ್ಡೇಕರ‌ ಮಂಜಪ್ಪನವರಿಗೆ ಇಷ್ಟಲಿಂಗ ಧಾರಣೆ ಮಾಡಲು ಹಿಂದೆ ಮುಂದೆ ನೋಡಿದರು.‌ ಆಗ ಮಂಜಪ್ಪನವರು ಬಸವಣ್ಣನವರ ವಚನವೊಂದನ್ನು ಅವರ‌‌‌ ಮುಂದೆ ಹಿಡಿದರು.‌

ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ.

ಈ ವಚನ ಓದಿದ ಜಗದ್ಗುರುಗಳು ಹರ್ಡೇಕರ್ ಮಂಜಪ್ಪನವರನ್ನು‌ ಮಿಟಿ‌ಮಿಟಿ ನೋಡಿದರು. ಇದೆಲ್ಲ, ಸರಿ, ಆದರೆ ಕರ್ಮಠ ಲಿಂಗಾಯತರು ಇದನ್ನು‌ ಒಪ್ಪುವುದು ಕಷ್ಟ. ನನಗಿಂತಲೂ ಇಷ್ಟಲಿಂಗ ದೀಕ್ಷೆ ಕೊಡಲು ಯೋಗ್ಯರಾದವರು ಅಥಣಿಯ ಶಿವಯೋಗಿಗಳು. ಅವರಿಗೊಂದು‌ಕಾಗದ ಬರೆದು ಕೊಡುವೆ. ಅವರೇ ನಿನಗೆ ಇಷ್ಟಲಿಂಗ ದೀಕ್ಷೆ ಕೊಡಲು ಯೋಗ್ಯರೆಂದು ತಿಳಿ ಹೇಳಿ ಕಾಗದವೊಂದು‌ ಬರೆದು ಕೊಟ್ಟರು.

ಆ ಪತ್ರವನ್ನು ಜೊತೆಗೆ ಬಸವಣ್ಣನವರ ವಚನವೊಂದನ್ನು ಹಿಡಕೊಂಡು ಅಥಣಿಯ ಶಿವಯೋಗಿಗಳ ಬಳಿ ಮಂಜಪ್ಪನವರು ಹೋದರು.‌ಅಥಣಿಯ ಶಿವಯೋಗಿಗಳಾದರೋ ಹಿರಿಯ ಅನುಭಾವಿ, ಶರಣ ಜೀವಿ. ಬಸವಾದಿ ಶರಣ ಬಗೆಗೆ ಅಪಾರ ಪ್ರೀತಿ ಆದರಗಳಿರುವ ಶಕ್ತಿ. ಚಿತ್ರದುರ್ಗದ ಗುರುಗಳ‌ ಪತ್ರ ಹಾಗೂ ಬಸವಣ್ಣನವರ ವಚನವೊಂದನ್ನು ಓದಿದವರೆ ಹರ್ಡೇಕರ ಮಂಜಪ್ಪನವರಿಗೆ ಲಿಂಗಧಾರಣೆ ಮಾಡಲು ಒಪ್ಪಿದರು.

ಆದರೆ ಅವರೊಂದು ಕರಾರು ಹಾಕಿದರು. ನಾನು ಲಿಂಗದೀಕ್ಷೆ ಏನೋ ಮಾಡುತ್ತೇನೆ. ಆದರೆ ಆ ದಿನವೇ ನೀವು ಊರನ್ನು‌ ಬಿಟ್ಟು ಹೋಗಬೇಕು, ಏಕೆಂದರೆ ಧರ್ಮದ ಅರಿವಿಲ್ಲದ ಕರ್ಮಠ ಸಮಾಜದ ಜನರು‌‌‌ ನಿಮಗೆ ತೊಂದರೆ ಕೊಡಬಹುದು ಎಂದು ತಿಳಿಸಿದರು.‌ಅಂದಂತೆ ಮಂಜಪ್ಪನವರು ಇಷ್ಟಲಿಂಗ ಧಾರಣವನ್ನು ಮಾಡಿಕೊಂಡು‌ ರಾತೋರಾತ್ರಿ ಅಥಣಿಯಿಂದ ದಾವಣಗೆರೆಗೆ ಬಂದು ತಲುಪಿದರು.

ದಾವಣಗೆರೆಯಲ್ಲಿಯೆ ನೆಲೆ ನಿಂತು ಮದುವೆಯಾಗದೆ ಸಮಾಜಕ್ಕಾಗಿ ತಮ್ಮನ್ನು ತಾವು ಮುಡಿಪುಗೊಂಡರು. ಮೂರ್ನಾಲ್ಕು ಪತ್ರಿಕೆಗಳನ್ನು ಹೊರ ತಂದರು. ಆಧ್ಯಾತ್ಮಿಕ ಲೋಕವನ್ನು ಜನ‌ಮಾನಸಕ್ಕೆ ತಲುಪಿಸಿದರು. ರಾಜಕೀಯವನ್ನು ಪರಿಚಯಿಸಿದರು. ಯುವಕ ಯವತಿಯರಿಗೆ ಕಿವಿ ಮಾತು ಹೇಳಿದರು.

ಮಹಾತ್ಮಗಾಂಧಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಮಹಾತ್ಮ ಬಸವಣ್ಣನವರನ್ನು ಪರಿಚಯಿಸಿದರು.‌ ಆ ಕಾರಣಗಳಿಂದಲೇ ಗಾಂಧೀಜಿ : ೧೨ ನೇ ಶತಮಾನದಲ್ಲಿ , ಈ ಕನ್ನಡ ನೆಲದಲ್ಲಿ ಬಸವಣ್ಣನವರೆಂಬ ಮಹಾ‌ ಆನೆಯೊಂದು ನಡೆದು ಹೋಗಿದೆ. ನಾನು ಈ ನಾಡಿಗೆ ಯಾವ ಸಲಹೆಗಳನ್ನು ನೀಡಲಿ ? ಆ ಶರಣ ಮಾರ್ಗದಲ್ಲಿ‌‌ ನಡೆದರೆ ರಾಷ್ಟ್ರ ವೇ ಉದ್ಧಾರವಾಗುದರಲ್ಲಿ ಸಂದೇಹವಿಲ್ಲ ಎಂದರು.

ಆಲಮಟ್ಟಿಯ ಹಿನ್ನಿರಿನಲ್ಲಿ ಇವರ ಲಿಂಗೈಕ್ಯ ಸಮಾಧಿ ಇತ್ತು. ಅದನ್ನು ಸ್ಥಳಾಂತರಗೊಳಿಸಿ ಬೇರೆ ಸ್ಥಳಕ್ಕೆ ಅದನ್ನು‌ ವರ್ಗಾಯಿಸಲಾಗಿದೆ. ಬಸವ ತತ್ವ ಪ್ರಸಾರಕ್ಕೆ ಹೊರಟಾಗ ಕರ್ಮಠ ಲಿಂಗಾಯತರಿಂದ ಸೂಳೆಯ ಮಗ ಬರುತ್ತಿದ್ದಾನೆ ಎಚ್ಚರ ಎಂಬ ಬ್ಯಾನರಗಳು ಇವರನ್ನು ಸ್ವಾಗತಿಸಿವೆ.

ಹರ್ಡೇಕರ ಅವರಿಗಿಂತಲೂ ಪೂರ್ವದಲ್ಲಿ ಸಾಕಷ್ಟು ಮಠ ಮಾನ್ಯಗಳಿದ್ದವು. ಆದರೆ ಅವರಾರು ಬಸವ ಜಯಂತಿಯನ್ನು‌ ಆಚರಿಸಬೇಕೆಂಬ ಯೋಜನೆ, ಯೋಚನೆ ಮಾಡಿರಲಿಲ್ಲ.‌ಇದನ್ನು‌ ಮೊಟ್ಟ ಮೊದಲು ಜಾರಿಗೆ ತಂದವರು ಹರ್ಡೇಕರ ಮಂಜಪ್ಪನವರು.

ಹರ್ಡೇಕರ ಮಂಜಪ್ಪ ನಮಗೆಲ್ಲ ಆದರ್ಶ.

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!