ಮೀಸಲಾತಿ ಬೇಡಿಕೆಯ ಚಳುವಳಿಗಳ ಹಿಂದೆ ಬೇರೆ ಇನ್ನಾರೋ ಇದ್ದಾರೆ !!??

ಕರ್ನಾಟಕದಲ್ಲಿ ಒಮ್ಮಿದೊಮ್ಮೆ ಮೀಸಲಾತಿ ಬೇಡಿಕೆಯ ಚಳುವಳಿಗಳು ಆರಂಭವಾಗಿವೆ. ಕುರುಬರು, ನಾಯಕರು, ಜಂಗಮರು ಹಾಗೂ ಪಂಚಮಸಾಲಿಗಳು ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಚಳುವಳಿ ನಡೆಸುತ್ತಿದ್ದಾರೆ. ಒಕ್ಕಲಿಗರೂ ನಾವೇನು ಕಡಿಮೆ ಇಲ್ಲ ಎಂದು ತಮ್ಮ ಸಮಾಜದ ಗುರುಗಳನ್ನು ಮುಂದಿಟ್ಟುಕೊಂಡು ಚಳುವಳಿಯ ರೂಪರೇಷೆಗಳನ್ನು ತಯಾರಿಸುತ್ತಿದ್ದಾರೆ. ಈಗಾಗಲೇ ಸದಾಶಿವ ಆಯೋಗದ ವರದಿ ಜಾರಿಯಾಗಲೇಬೇಕೆಂದು ಮಾದಿಗ ಜನಾಂಗ ಪಟ್ಟು ಹಿಡಿದು ಕುಳಿತಿದೆ.

ಕರ್ನಾಟಕದಲ್ಲಿ ಸರಕಾರ ನಡೆಸುವ ಯಡಿಯೂರಪ್ಪನಿಗೆ ಅಡಕತ್ತಿನಲ್ಲಿ ಅಡಕೆಯ ಸ್ಥಿತಿಯಂತಾಗಿದೆ. ಜಟ್ಟಿ ಕೆಳಕ್ಕೆ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎನ್ನುವಂತೆ ಯಡಿಯೂರಪ್ಪ ಮಾತ್ರ ಎಲ್ಲಾ ಜಾತಿ ಜನ ವರ್ಗಕ್ಕೂ ಸಾಮಾಜಿಕ ನ್ಯಾಯ ಒದಗಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಸಂವಿಧಾನ ತಜ್ಞರು ಮಾತ್ರ ಜಾತಿ ಮತಗಳ ಬೇಡಿಕೆಯೇ ಅಸಿಂಧುವಾಗಿದೆ. ಕಾನೂನು ಇದನ್ನು ಒಪ್ಪಲಾರದು. ಪಂಚಮಸಾಲಿಗೆ 2 ಎ ನಲ್ಲಿ ಅವಕಾಶ ನೀಡಿದರೆ ಈಗಾಗಲೇ ಅಲ್ಲಿರುವ ಜನತೆಗೆ ದ್ರೋಹ ಬಗೆದಂತೆ ಆಗುತ್ತದೆ ಎನ್ನುತ್ತಾರೆ. ಇದೆಲ್ಲ ಏನೇ ಕಲಸುಮೇಲೋಗರ ಇದ್ದರೂ ನಾನಿದನ್ನು ಇಲ್ಲಿ ಚರ್ಚಿಸಲು ಬಯಸಲಾರೆ. ಈ ಬಗ್ಗೆ ಸಂವಿಧಾನ ತನ್ನ ನಿರ್ಣಯವನ್ನು ಕೈಗೊಳ್ಳುತ್ತದೆ. ರಾಜಕೀಯ ಕಾರಣಕ್ಕಾಗಿ ಯಡಿಯೂರಪ್ಪ ಯಾವುದೆ ನಿರ್ಧಾರ ತೆಗೆದುಕೊಂಡರೂ ಸಹ ಆ ಕಾಯ್ದೆಯನ್ನು ಸಾಂವಿಧಾನಿಕ ಹಕ್ಕಿನಲ್ಲಿ ಪ್ರಶ್ನಿಸುವ ಅವಕಾಶವಂತೂ ಇದ್ದೇ ಇದೆ.

ನನ್ನ ಪ್ರಶ್ನೆ ಇದಲ್ಲವೆ ಅಲ್ಲ. ಜನೇವರಿ ಹದಿನಾಲ್ಕರ ಸಂಕ್ರಮಣದಂದು ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮಿಜಿ ತಮ್ಮ ಪಂಚಮಸಾಲಿ ಜನಾಂಗಕ್ಕೆ 2 ಎ ಮೀಸಲಾತಿಯ ರಣಕಹಳೆ ಊದಿದಾಗ ಅದನ್ನು ಉದ್ಘಾಟಿಸಿದವರು ಬಿಜಾಪುರದ ಬಸ್ಸನಗೌಡ ಪಾಟೀಲ ಯತ್ನಾಳರು. ಈ ಯತ್ನಾಳ ಸಾಹೇಬರ ಮಾತು ಕತೆ ಸರಕಾರವನ್ನು ಮುಜುಗರಕ್ಕೀಡು ಮಾಡುವ ಹೇಳಿಕೆಗಳನ್ನು ನೋಡಿದರೆ ಸಹಜವಾಗಿಯೆ ಯಾರಿಗಾದರೂ ಅನುಮಾನ ಬಂದೇ ಬರುತ್ತದೆ. ಯತ್ನಾಳ ಒಬ್ಬರೆ ಯಡಿಯೂರಪ್ಪ ಸರಕಾರದ ವಿರುದ್ಧ ಗುಡುಗಲು ಸಾಧ್ಯವಿಲ್ಲ. ಇವರ ಹಿಂದೆ ಬೇರೆ ಇನ್ನಾರೋ ಇದ್ದಾರೆ ಎಂಬುದು ಸುಸ್ಪಷ್ಟವಾಗಿ ಗೋಚರವಾಗುತ್ತದೆ.

ಹಾಗಾದರೆ ಬಸ್ಸನಗೌಡ ಪಾಟೀಲ ಯತ್ನಾಳರ ಹಿಂದೆ ಇರುವವರು ಯಾರು ? ಎಂಬ ಪ್ರಶ್ನೆಗೆ ಥಟ್ಟನೆ ದೊರಕುವ ಉತ್ತರ ಕೇಶವ ಕೃಪ ಎಂದು. ಯಡಿಯೂರಪ್ಪನವರೆ ಕರ್ನಾಟಕದ ಮುಖ್ಯ ಮಂತ್ರಿ ಆಗಲಿ ಎಂದು ಕೇಶವ ಕೃಪ ಬಯಸಿದ್ದಲ್ಲ. ಅನಿವಾರ್ಯವಾಗಿ ಯಡಿಯೂರಪ್ಪನನ್ನು ಒಪ್ಪಿಕೊಳ್ಳಲೇ ಬೇಕಾದ ಸಂದರ್ಭದಲ್ಲಿ ಅದು ಸಿಲುಕಿದೆ. ಯಡಿಯೂರಪ್ಪನ ವಿರುದ್ಧ ಸಡ್ಡು ಹೊಡೆದು ಹೋಗುವ ದಾಷ್ಟ್ಯತನವಾಗಿ, ಆ ಶಕ್ತಿಯಾಗಲಿ ಕೇಶವ ಕೃಪೆಗೆ ಇಲ್ಲವೆ ಇಲ್ಲ. ಆದರೆ ಯಡಿಯೂರಪ್ಪನ ಸರಕಾರದಲ್ಲಿ ಕಡ್ಡಿ ಆಡಿಸಬಹುದಾದ ಅವಕಾಶವಂತೂ ಅದಕ್ಕೆ ಇದ್ದೇ ಇದೆ ಎಂಬುದನ್ನು ಮನಗಂಡು ಬಸ್ಸನಗೌಡ ಪಾಟೀಲ ಯತ್ನಾಳ ಮೂಲಕ ಅದನ್ನು ಮಾಡುತ್ತಿದೆ ಎಂದು ಕೆಲವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಬಸ್ಸನಗೌಡ ಪಾಟೀಲ ಯತ್ನಾಳ ಹಾಗೂ ಯಡಿಯೂರಪ್ಪ ಇಬ್ಬರೂ ಲಿಂಗಾಯತರೆ. ಲಿಂಗಾಯತರಿಂದಲೇ ಲಿಂಗಾಯತರನ್ನು ಹಣಿದರೆ ಅದು ಸೂಕ್ತವಾದುದು ಎಂಬ ಕುಯುಕ್ತಿ ಅವರಲ್ಲಿರುವಂತ್ತಿದೆ.

ಈ ರಾಜಕೀಯ ಕಲಸು ಮೇಲೋಗರ ಒತ್ತಟ್ಟಿಗಿರಲಿ. ಕೂಡಲ ಸಂಗಮದ ಜಯಮೃತ್ಯುಂಜಯ ಜಗದ್ಗುರು ಎಲ್ಲರೂ ಬಲ್ಲಂತೆ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಲಿಂಗಾಯತ ಅಲ್ಪ ಸಂಖ್ಯಾತರ ಹೋರಾಟಕ್ಕೆ ಅಂದು ರಾಜಕೀಯ ಬಣ್ಣ ಅಂಟಿ ಆ ಚಳುವಳಿ ತಾನು ತಲುಪಬೇಕಾದ ಗುರಿಯನ್ನು ತಲುಪದೆ ಹೋಯಿತು. ಅದಕ್ಕೆ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ಸಮ ಪಾಲು ಇದೆ. ಲಿಂಗಾಯತ ಹೋರಾಟವನ್ನು ತನ್ನ ಪಕ್ಷದ ಗೆಲುವಿಗೆ ಕಾರಣವನ್ನಾಗಿ ಮಾಡಿಕೊಳ್ಳಬೇಕೆಂದು ಕಾಂಗೈಗಳು ಹೊಂಚು ಹಾಕಿದರೆ, ಈ ಬಿಜೆಪಿಗರು ಲಿಂಗಾಯತಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ದೊರೆತು ಬಿಟ್ಟರೆ ಅದು ಹಿಂದೂ ಧರ್ಮದ ಕುಣಿಕೆಯಿಂದ ಹೊರಹೋಗುತ್ತದೆ ಎಂಬ ಆತಂಕ ಬಿಜೆಪಿಗರಿಗೆ. ಇಬ್ಬರ ಹಗ್ಗ ಜಗ್ಗಾಟಕ್ಕೆ ಬಸವ ಚಳುವಳಿಯ ಆಶಯಗಳನ್ನಿಟ್ಟುಕೊಂಡು ಹೊರಟಿದ್ದ ಬಹುಜನರಿಗೆ ತುಂಬಾ ನಿರಾಶೆಯಾದುದು ಸುಳ್ಳಲ್ಲ.

ಹೀಗೆ ನಿರಾಶೆಗೊಂಡವರಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿಗಳೂ ಒಬ್ಬರು. ಅತ್ತ ದರಿ ಇತ್ತ ಪುಲಿ ಎಂಬಂತೆ ಲಿಂಗಾಯತ ಹೋರಾಟವನ್ನೂ ಮಾಡುವಂತ್ತಿಲ್ಲ. ಇತ್ತ ಪಂಚಮಸಾಲಿ ಜನಾಂಗವನ್ನೂ ಮತ್ತೆ ಸಂಘಟಿಸುವಂತ್ತಿಲ್ಲ ಎಂಬ ಸಂಕಟ ಜಯ ಮೃತ್ಯುಂಜಯ ಅವರನ್ನು ಆವರಿಸಬೇಕು. ಏಕೆಂದರೆ ಇಷ್ಟರಲ್ಲಾಗಲೆ ಹರಿಹರದ ಪಂಚಮಸಾಲಿ ಪೀಠದ ಮತ್ತೊಬ್ಬ ಜಗದ್ಗುರು ವಚನಾನಂದರ ಮೀಟರ್ ಏರತೊಡಗಿತ್ತು. ಹೇಗೂ ಕೇದಾರ ಬದರಿ ಕಾಶಿ ಹರಿದ್ವಾರಗಳಲ್ಲಿ ತಿರುಗಾಡಿ ಅಲ್ಲೆಲ್ಲ ನಾಗಾಸಾಧುಗಳ ಪರಿಚಯ ಮಾಡಿಕೊಂಡ ಅನುಭವ ಇತ್ತು. ಆ ಅನುಭವವನ್ನು ಹಾಗೂ ತಮಗೆ ಈ ಮೊದಲೇ ಬರುತ್ತಿದ್ದ ಯೋಗವನ್ನು ಸದುಪಯೋಗ ಪಡಿಸಿಕೊಂಡು ಪಂಚಮಸಾಲಿ ಪೀಠದ ಏಕಮೇವ ಜಗದ್ಗುರು ಎಂಬಂತೆ ಮೆರೆಯತೊಡಗಿದ್ದರು. ಯಡಿಯೂರಪ್ಪನವರನ್ನೇ ಸಾರ್ವಜನಿಕವಾಗಿ ಹಿಡಿದು ಕೂರಿಸಿ ನಮ್ಮ ಸಮಾಜದ ಶಾಸಕರಿಗೆ ಮಂತ್ರಿಗಳನ್ನು ಮಾಡಲೇಬೇಕೆಂದು ಹಠ ತೊಟ್ಟವರಂತೆ ಮಾತನಾಡಿದ್ದು ನಾವೆಲ್ಲ ನೋಡಿ ಆಗಿದೆ.

ಕ್ರಮೇಣ ಹರಿಹರ ಪೀಠದ ವಚನಾನಂದರು ಪಂಚಮಸಾಲಿ ಜನಾಂಗಕ್ಕೆ ಅನಿವಾರ್ಯವಾಗುತ್ತಿರುವಂತೆ ಸಹಜವಾಗಿ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೂ ತಮ್ಮ ಅಸ್ತಿತ್ವದ ಪ್ರಶ್ನೆ ಕಾಡತೊಡಗಿರಬಹುದು. ಆದ್ದರಿಂದಲೇ ತಮ್ಮ ಅಸ್ತಿತ್ವಕ್ಕಾಗಿ ಸಿಕ್ಕ ಬಾಣವೆ ಪಂಚಮಸಾಲಿ ಮೀಸಲಾತಿ ಹೋರಾಟ. ಇಷ್ಟರಲ್ಲಾಗಲೆ ಯಡಿಯೂರಪ್ಪ ಮತ್ತು ಬಸ್ಸನಗೌಡ ಪಾಟೀಲ ಯತ್ನಾಳರ ಸಂಬಂಧ ಹಳಸಿತ್ತು. ಈ ಕಡೆ ಜಯ ಮೃತ್ಯುಂಜಯ ಸ್ವಾಮಿಯ ಹೊಟ್ಟೆ ಹಸಿದಿರುವುದಕ್ಕೂ ಸಮನಾಯ್ತು ಎಂದು ವಿಶ್ಲೇಷಿಸಲಾಗುತ್ತದೆ. ಏಕೆಂದರೆ ಜನೇವರಿ ಹದಿನಾಲ್ಕರಂದು ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮಿ ಪಂಚಮಸಾಲಿಗಳ ನಡಿಗೆ ವಿಧಾನ ಸೌಧದ ಎಡೆಗೆ ಎಂದು ಪಾದಯಾತ್ರೆಯನ್ನು ಘೋಷಿಸಿದ ಸಂದರ್ಭದಲ್ಲಿಯೆ ಅತ್ತ ವಚನಾನಂದ ಹಾಗೂ ಪಟಾಲಂ ಹರಿಹರದಲ್ಲಿ ಜಾತ್ರೆ ನಡೆಸಿದರು. ಕೋವಿಡ್ ಕಾರಣಕ್ಕೆ ಇಡೀ ನಾಡಿನ ತುಂಬಾ ಹಿಂದಿನಿಂದ ನಡೆಯುತ್ತ ಬಂದಿದ್ದ ಜಾತ್ರೆಗಳು ನಿಂತು ಹೋಗಿದ್ದವು. ಪ್ರತಿ ವರ್ಷ ನಡೆಸುವ ಸಿರಿಗೆರೆ ತರಳಬಾಳು ಹುಣ್ಣೆಮೆ, ಕೊಪ್ಪಳ, ಸಿದ್ಧಗಂಗಾ ಜಾತ್ರೆಗಳು ನಡೆಸದಂತೆ ಸರಕಾರವೇ ಸೂಚಿಸಿತ್ತು. ಇಂಥ ಸಂದರ್ಭದಲ್ಲಿ ಹರಿಹರದ ಜಾತ್ರೆ ನಡೆಯಲು ಅವಕಾಶ ಮಾಡಿಕೊಟ್ಟವರು ಯಾರು ? ಮತ್ತು ಏಕೆ ? ಸಚಿವ ಮುರುಗೇಶ್ ನಿರಾಣಿಯವರನ್ನು ಮಂತ್ರಿ ಮಾಡಿದ್ದು, ಹರಿಹರದ ಪೀಠಕ್ಕೆ ಮುಖ್ಯ ಮಂತ್ರಿಗಳೇ ಲಕ್ಷಾಂತರ ಹಣ ಕೊಡುವ ಹೇಳಿಕೆ ಕೊಟ್ಟದ್ದು ಜಯ ಮೃತ್ಯುಂಜಯ ಸ್ವಾಮಿಯನ್ನು ಮತ್ತಷ್ಟು ಬಡಿದೆಬ್ಬಿಸಲು ಕಾರಣವಾಯಿತು ಎಂದು ಹೇಳುವವರಿದ್ದಾರೆ. ಆದ್ದರಿಂದಲೇ ಜನೇವರಿ 14 ರಂದೆ ಕೂಡಲ ಸಂಗಮದಲ್ಲಿ ಪಾದಯಾತ್ರೆ ಹೊರಟಿದ್ದರೆ ಅತ್ತ, ತನಗೂ ಈ ಪಾದಯಾತ್ರೆಗೂ ಯಾವುದೆ ಸಂಬಂಧವಿಲ್ಲವೆನ್ನುವಂತೆ ವಚನಾನಂದರು ಓಲಾಡುತ್ತಿದ್ದುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಆರೋಪಿಸುವವರಿದ್ದಾರೆ.

ಸರಕಾರದ- ಹರಿಹರ ಪೀಠದ ಉಪೇಕ್ಷೆಯ ನಡುವೆಯೂ ಜಯ ಮೃತ್ಯುಂಜಯ ಸ್ವಾಮಿಜಿಯ ನೇತೃತ್ವದ ಪಾದಯಾತ್ರೆ ಹರಿಹರದವರೆಗೂ ಬಂದಾಗ ವಚನಾನಂದರು ಅನಿವಾರ್ಯವಾಗಿ ಇವರ ಜೊತೆಗೂಡಬೇಕಾಯಿತು. ಇಲ್ಲದೆ ಹೋದರೆ ಪಂಚಮಸಾಲಿ ಜನಾಂಗದವರ ಸಾತ್ವಿಕ ಕೋಪಕ್ಕೆ ಗುರಿಯಾಗಬೇಕಾಯಿತು. ಈ ನಡುವೆ ಮುರುಗೇಶ್ ನಿರಾಣಿ ಹಾಗೂ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಏನೆಲ್ಲ ಪ್ರಯತ್ನಗಳನ್ನು ವಚನಾನಂದರು ಮಾಡಬೇಕಾಯಿತೋ ಅದೆಲ್ಲವನ್ನೂ ಮಾಡಿದರೂ ಅದು ಫಲ ನೀಡಲಿಲ್ಲ. ಆಗ ಅನಿವಾರ್ಯವಾಗಿ ಹರಿಹರದ ಹಾಗೂ ಕೂಡಲ ಸಂಗಮದ ಸ್ವಾಮೀಜಿ ದ್ವಯರುಗಳು ಒಂದಾಗಿ ಪಾದಯಾತ್ರೆ ಮಾಡುವಂತಾಯಿತು. ಇದು ಪಂಚಮಸಾಲಿ ಜನಾಂಗದ ದೃಷ್ಟಿಯಿಂದ ಸರಿಯಾದುದೆ ಆಗಿದೆ.

ತಮಾಷೆ ಹಾಗೂ ಆಶ್ಚರ್ಯವೆಂದರೆ ಎಂದೂ ಪಂಚಮಸಾಲಿಗಳ ಪೀಠದ ಕುರಿತು ಒಂದೆ ಒಂದು ಒಳ್ಳೆಯ ಮಾತನ್ನು ಆಡದಿರುವ, ಆ ಕಡೆ ಹಣಕಿಯೂ ಹಾಕದ, ಪಂಚಾಚಾರ್ಯ ಪೀಠದ ಜಗದ್ಗುರುಗಳು ಒಮ್ಮಿದೊಮ್ಮೆ ಜ್ಞಾನೋದಯವಾಯಿತು ಎನ್ನುವಂತೆ ಪಂಚಮಸಾಲಿಯವರ ಹೋರಾಟಕ್ಕೆ ಬೆಂಬಲ ನೀಡಿದ್ದಲ್ಲದೆ, ವೀರಶೈವ ಲಿಂಗಾಯತವನ್ನು ಓಬಿಸಿ ಪಟ್ಟಿಗೆ ಸೇರಿಸಿರಿ ಎಂದು ದೀಢೀರನೆ ಸಮಾವೇಶ ಮಾಡಿದರು. ಅಸಲಿಗೆ ಪಂಚಾಚಾರ್ಯ ಜಗದ್ಗುರುಗಳು ಹಾಗೂ ಕೆಲವು ವಿರಕ್ತ ಮಠಾಧೀಶರ ಗುಂಪು ಬೆಂಗಳೂರಿನಲ್ಲಿ ಸಭೆ ಸೇರಿ ಪಂಚಮಸಾಲಿಯ ಹೋರಾಟವನ್ನು ಜಖಂಗೊಳಿಸಬೇಕೆಂದೆ ರೂಪಿತವಾದದ್ದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಮುಖ್ಯ ಮಂತ್ರಿ ಯಡಿಯೂರಪ್ಪನವರು ಪಂಚಮಸಾಲಿ ಅಡಕತ್ತಿನಲ್ಲಿ ಸಿಕ್ಕಿ ಹಾಕಿಕೊಂಡದ್ದರಿಂದ ಪಾರು ಮಾಡಲು ಅವರ ಮಗ ವಿಜಯೇಂದ್ರ ಹೂಡಿದ ಪ್ರತಿ ತಂತ್ರ ಇದಾಗಿತ್ತು ಎಂಬುದನ್ನು ಯಾರಾದರೂ ನಂಬಬಹುದಾದ ಅವಕಾಶಗಳು ಇಲ್ಲಿ ಹೇರಳವಾಗಿವೆ.

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ವಿಜಯೇಂದ್ರ ಒಂದು ಆಲೋಚಿಸಿದರೆ ಈ ಪಂಚಪೀಠದ ಮುಖ್ಯಸ್ಥರು ಮತ್ತು ವಿರಕ್ತರು ಆಲೋಚಿಸಿದ್ದು ಇನ್ನೊಂದು ಬಗೆ. ಈಗಾಗಲೇ ಜಂಗಮರಿಗಾಗಿ ಬೇಡ ಜಂಗಮ ಜಾತಿ ಪತ್ರ ನೀಡಿ ಎಂದು ಹೋರಾಟವನ್ನು ನಡೆಸಲಾಗುತ್ತಿದೆ. ಇದಕ್ಕೆ ವಿರಕ್ತರ ಹಾಗೂ ಪಂಚಾಚಾರ್ಯರ ಬೆಂಬಲವೂ ಇದೆ ಎಂಬುದು ಜನ ಜನಿತ ಸಂಗತಿ. ಇಂಥ ಸಂದರ್ಭದಲ್ಲಿ ಪಂಚಮಸಾಲಿಗಳ ಮೀಸಲಾತಿ ಹೋರಾಟಕ್ಕೆ ಕೊಕ್ಕೆ ಹಾಕಿದರೆ ಇಡೀ ಲಿಂಗಾಯತರ ಅಂಗಳದಲ್ಲಿ ಇನ್ನು ಮುಂದೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಸತ್ಯ ಅರಿತುಕೊಂಡಿದ್ದರಿಂದ ಅನಿವಾರ್ಯವಾಗಿ ಪಂಚಮಸಾಲಿಗಳ ಹೋರಾಟಕ್ಕೆ ಬೆಂಬಲ ಸೂಚಿಸಬೇಕಾಯಿತು.

ಯಾವುದೆ ಶಕ್ತಿಯನ್ನು ಹಣಿಯಲು ಸಾಧ್ಯವಿಲ್ಲ ಎಂದಾದಾಗ ಅಥವಾ ತಮ್ಮ ಅಸ್ತಿತ್ವವೇ ಕರಗಿ ಹೋಗುತ್ತದೆ ಎಂದಾದಾಗ ಸಹಜವಾಗಿ ಅನಾರೋಗ್ಯಕರ ಮನಸ್ಸುಗಳು ತಾತ್ಕಾಲಿಕವಾಗಿ ಆ ಶಕ್ತಿಗಳೊಂದಿಗೆ ಸೇರಿ ಹೊಂದಾಣಿಕೆಯ ಮಾತನಾಡತೊಡಗುತ್ತವೆ. ಅವರ ಏನೆಲ್ಲವನ್ನು ಪ್ರೀತಿಸಿದಂತೆ ತೋರಿಸಿಕೊಳ್ಳುತ್ತವೆ. ಆದರೆ ಅದು ದೃತರಾಷ್ಟ್ರನ ಆಲಿಂಗನದಂತೆ ಎಂಬ ಐತಿಹಾಸಿಕ ಸಂಗತಿಯನ್ನು ಯಾರೂ ಮರೆಯಬಾರದು.

ಏಕೆಂದರೆ ಈ ಹಿಂದೆ ಬಸವಣ್ಣನವರ ಭಾವ ಚಿತ್ರ ಕಂಡರೆ ಎಗರಿ ಬೀಳುತ್ತಿದ್ದವರು, ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಬರಹದ ಕೆಳಗೂ ಕೂಡಲು ಹಿಂದು ಮುಂದೆ ನೋಡಿದವರು ಈಗ ಬಸವಣ್ಣನವರ ಭಾವಚಿತ್ರವೂ ಇರಲಿ ಎಂದು ಬಯಸುವುದು ಸಮಯ ಸಾಧಕತನವೆ ಹೊರತು, ಮತ್ತಿನ್ನೇನು ಅಲ್ಲ ಎಂದು ವಾಗ್ಮಿಗಳು ನುಡಿಯುತ್ತಾರೆ. ಬಸವಣ್ಣನವರು ಇಡೀ ಜಗತ್ತಿಗೆ ಅನಿವಾರ್ಯವಾದಾಗ ಸಹಜವಾಗಿಯೇ ಇವರೂ ಬಸವಣ್ಣನವರನ್ನು ಸಹಿಸಿಕೊಳ್ಳಬೇಕಾಗಿದೆ.

ತೆರೆಯ ಮರೆಯಲ್ಲಿ ನಿಂತು ಆಟವಾಡುತ್ತಿದ್ದ ಕೇಶವ ಕೃಪವೆ ಮತ್ತೊಮ್ಮೆ ಇಲ್ಲಿ ಗೆಲ್ಲುವ ಸೂಚನೆಗಳಿವೆ. ಕುರುಬರು ತಮ್ಮನ್ನು ಎಸ್.ಟಿ.ಗೆ ಸೇರಿಸಲು ಒತ್ತಾಯಿಸಿದರೆ, ಪಂಚಮಸಾಲಿಗಳು 3 ಬಿ ಯಿಂದ 2 ಎ ಗೆ ಸೇರಿಸಲು ಕೇಳಿಕೊಳ್ಳುತ್ತಿದ್ದಾರೆ. ಒಕ್ಕಲಿಗರು ಮತ್ತೊಂದು, ಈಡಿಗರು ಇನ್ನೊಂದು, ಮಾದಿಗರು ಮಗದೊಂದು ಮೀಸಲಾತಿಯನ್ನು ಕೇಳುವ ಮೂಲಕ ಸಂವಿಧಾನದ ಮೂಲ ಆಶಯವಾದ ಮೀಸಲಾತಿಯನ್ನೇ ಸಂಶಯದಿಂದ ನೋಡುವಂತೆ ಮಾಡುವುದು. ಸಂವಿಧಾನ ಕೊಡಮಾಡಿದ ಮೀಸಲಾತಿಯನ್ನು ಪ್ರಶ್ನಿಸುವುದೆಂದರೆ ಅದು ಜೇನುಗೂಡಿಗೆ ಕೈ ಇಟ್ಟಂತೆ. ತೆರೆಯ ಮರೆಯಲ್ಲಿ ನಿಂತು ಪ್ರೇರೇಪಿಸುವವರು ಮೇಲ್ನೋಟದಲ್ಲಿ ಕಾಣಿಸುವುದಿಲ್ಲ. ಬಹಿರಂಗವಾಗಿ ಕಾಣುವವರೆ ಬೇರೆ. ಪರರ ತಟ್ಟೆಯಲ್ಲಿರುವ ಅನ್ನವನ್ನು ಹಂಚಿಕೊಡಿ ಎಂದು ನ್ಯಾಯ ತೆಗೆಯುವುದು ಈಗಾಗಲೇ ಆ ತಟ್ಟೆಯಲ್ಲಿಯ ಊಟ ಮಾಡುವವರ ಕಣ್ಣು ಕೆಂಪಗೆ ಮಾಡುತ್ತದೆ. ಇವರಿಬ್ಬರ ಹೊಡೆದಾಟದಲ್ಲಿ ತುಪ್ಪ ಜಾರಿ ತಮ್ಮ ರೊಟ್ಟಿಗೆ ಬೀಳಲಿ ಎಂಬ ಹಿಕಮತ್ತು ಇದೆ ಎಂದು ರಾಜಕೀಯ ವಿಶ್ಲೇಷಕರು ವಿವರಿಸುತ್ತಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಜಯ ಮೃತ್ಯುಂಜಯ ಸ್ವಾಮಿಜಿಗಳು, ಹರಿಹರದ ವಚನಾನಂದ ಸ್ವಾಮೀಜಿಗಳಿರ್ವರು ಲಿಂಗಾಯತ ಧರ್ಮದ ಅಲ್ಪಸಂಖ್ಯಾತ ಹೋರಾಟಕ್ಕೆ ಮತ್ತೆ ಅಣಿಗೊಳ್ಳಬೇಕು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ಸಿಕ್ಕರೆ ಖಂಡಿತವಾಗಿಯೂ ಲಿಂಗಾಯತರಲ್ಲಿ ಬರುವ 100 ಕ್ಕೂ ಹೆಚ್ಚು ಒಳ ಪಂಡಗಳು ಅದರ ಲಾಭವನ್ನು ಪಡೆಯುತ್ತವೆ. ಆಗ ವೀರಶೈವರು ಓಬಿಸಿ ಕೇಳುವುದಾಗಲಿ, ಜಂಗಮರು ಬೇಡ ಜಂಗಮರೆಂದು ವಾದಿಸುವುದಾಗಲಿ, ಪಂಚಮಸಾಲಿಗಳು 2 ಎ ಕೊಡಿ ಎಂದು ವರತ ತೆಗೆಯುವುದಾಗಲಿ ಇರುವುದಿಲ್ಲ. ಲಿಂಗಾಯತ ಧರ್ಮ ಅನುಗಾಲದಿಂದಲೂ ಸರಕಾರದ ಸೌಲತ್ತುಗಳ ಕಡೆಗೆ ನೋಡಿಕೊಂಡು ಬೆಳೆದವುಗಳಲ್ಲ. ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡವರು. ಸಾರ್ವಜನಿಕ ಸಂಪತ್ತಿನ ಮೂಲಕ ಮಠಗಳನ್ನು ಕಟ್ಟಿ ಶಾಲೆ ಕಾಲೇಜು ಆಸ್ಪತ್ರೆಗಳನ್ನು ಕಟ್ಟಿಸಿದವರು. ವೈದಿಕ ಮಠಗಳಾವು ಈ ಕಡೆ ಯೋಚಿಸದ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಹತ್ತಿರವಾದವುಗಳು ಲಿಂಗಾಯತ ಮಠಗಳು. ಲಿಂಗಾಯತರಲ್ಲೂ ಬಡವರು ಹಿಂದುಳಿದವರು ಇದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೂ ಇರಬಹುದು. ಆದರೆ ತಳ ಸಮುದಾಯದಷ್ಟು ಇವರ ಸಾಮಾಜಿಕ ಆರ್ಥಿಕ ಸ್ಥಾನ ಮಾನ ಕುಸಿದು ಹೋಗಿಲ್ಲ. ನಿಷ್ಪøಹ ಕಾಯಕ ಮತ್ತು ದಾಸೋಹದ ಮೂಲಕ ಕಟ್ಟಿ ಬೆಳೆಸಿದ ಲಿಂಗಾಯತ ಧರ್ಮದ ಮುಖಂಡರು ಸರಕಾರಕ್ಕೆ ಕೇಳುವುದೇ ಇದ್ದರೆ ಅಲ್ಪಸಂಖ್ಯಾತ ಸ್ಥಾನಮಾನ ಕೇಳಬೇಕೆ ಹೊರತು, ಜುಜುಬಿ 2 ಎ ಪ್ರವರ್ಗವನ್ನಲ್ಲ ಎಂಬ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳ ಮಾತನ್ನು ನಾನಿಲ್ಲಿ ನಮೂದಿಸಬಯಸಿದ್ದೇನೆ.

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಮೀಸಲಾತಿ ಬೇಡಿಕೆಯ ಚಳುವಳಿಗಳ ಹಿಂದೆ ಬೇರೆ ಇನ್ನಾರೋ ಇದ್ದಾರೆ !!??

  1. ಸರಿಯಾದ ವಿಶ್ಲೇಷಣೆ. ಅಲ್ಪಕ್ಕೆ ಆಶಿಸಿ ಕಲ್ಪಕ್ಕೆ ಎರವಾಗುವುದು ವಿವೇಕಯುತವಲ್ಲ. ಪಂಚಮಸಾಲಿ ಮಠಗಳು ಈಗ ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ. ಈ ಎರಡೂ ಪೀಠಗಳು ಸ್ವತಂತ್ರವಾದುವೇ? ಸಮಾನಾಂತರವೇ? ಎರಡಕ್ಕೂ ಹೊಂದಾಣಿಕೆ ಇಲ್ಲವೇ? ಇದು ಹೇಗೆ!?

  2. ಉತ್ತಮ ವಿಶ್ಲೇಷಣೆ.. ಏನೇ ಆಗಲಿ ಎಲ್ಲರೂ ಲಿಂಗಾಯಿತ ಧಾರ್ಮಿಕ ಸಾಂವಿಧಾನಿಕ ಮಾನ್ಯತೆಗಾಗಿ ಪರಿಶ್ರಮ ಪಡಬೇಕು… ಆಕಳನ್ನು ಕಟ್ಟಬೇಕೆ ಹೊರತು ಮಜ್ಜಿಗೆ ಮೊಸರಿಗಾಗಿ ಅಲೆದಾಡುವುದಲ್ಲ… ಮಠಾಧಿಪತಿಗಳು ಇದನ್ನು ಅರಿತರೆ ವಿಶ್ವವೇ ಬಸವಮಯ

  3. ಸತ್ಯವನ್ನ ಒಂದಿಷ್ಟು ಬಿಡದೆ ವಿಶ್ಲೇಷಣೆ ಮಾಡಿದಿರಿ

  4. ಭಾರತೀಯ ಇಂದಿನ ದಯನಿಯ ‌ಸ್ಥಿತಿಗೂ ಈ ಕೇಶವ ಕೃಪಾಳುಗಳೆ ಕಾರಣ.

    ಲಿಂಗಾಯತ ಧರ್ಮದ ಪ್ರಶ್ನಾತೀತ ನಾಯಕ ಎನ್ನುವಂತೆ ಇದ್ದ ಮುಖ್ಯಮಂತ್ರಿಯನ್ನು ನೇರ ಯುದ್ದದಲ್ಲಿ ‌ಎದುರಿಸಲಾಗದ ಹೇಡಿಗಳು ಆಯ್ಕೆ ಮಾಡಿಕೊಂಡಿದ್ದು ಇಂತಹ ಬಚ್ಚಲ ಚರಂಡಿಯ ಕೆಲಸ..
    ಇನ್ನೊಂದು ಪ್ರಬಲ ಕಾರಣ ಎಂದರೆ,
    ಎಂಟು ನೂರು ವರುಷಗಳು ಸಂದಿದರೂ ಲಿಂಗಾಯತ ಒಳಪಂಗಡಗಳನ್ನು ಸಂಘಟಿಸಲಾಗದ ಗುರು-ವಿರಕ್ತ ಮಠಗಳು..

Leave a Reply

Your email address will not be published. Required fields are marked *

error: Content is protected !!