ಭಕ್ತನ ಅಜ್ಞಾನ ಕಳೆದು ಜ್ಞಾನವನ್ನು ಕೊಡಲು ಮಠಾಧೀಶರೇನು ಬಸವಾದಿ ಶರಣರೆ ?

ಭಕ್ತನ ಅಜ್ಞಾನ ಕಳೆದು ಜ್ಞಾನವನ್ನು ಕೊಡಲು ಮಠಾಧೀಶರೇನು ಬಸವಾದಿ ಶರಣರೆ ?

ಕರ್ನಾಟಕದ ಬಹುತೇಕ ಮಠಗಳು ಬಸವ ಪ್ರಣೀತ ಲಿಂಗಾಯತ ತತ್ವಗಳನ್ನು ಬಿಟ್ಟು ಬಹುದೂರ ಹೋಗಿ ಬಿಟ್ಟಿವೆ. ಕೆಲವು ಮಠಗಳನ್ನು ಹೊರತು ಪಡಿಸಿ ಬಹುತೇಕ ಮಠಗಳಲ್ಲಿ ಸನಾತನ ವಾಸನೆ ತುಂಬಿ ತುಳುಕುತ್ತಿದೆ. ಇಷ್ಟಲಿಂಗ ಪೂಜೆ ಮಾಡುತ್ತಾರೋ ಇಲ್ಲವೊ ಗೊತ್ತಿಲ್ಲ, ಆದರೆ ತಮಗೆ ಅನ್ನ ಆಶ್ರಯ ನೀಡಿದ ಹಿಂದಿನ ಗುರುಗಳ ಗದ್ದುಗೆ ಪೂಜೆ ಮಾತ್ರ ತಪ್ಪದೆ ಮಾಡುತ್ತಿದ್ದಾರೆ. ತಮ್ಮ ಮಠಕ್ಕೆ ಬರುವ ಜನಗಳಿಗೆ ಇಷ್ಟಲಿಂಗ ಧಾರಣೆ, ಪೂಜಾ ವಿಧಾನ ಮುಂತಾದವುಗಳ ಕುರಿತು ಹೇಳದೆ ಕರ್ತೃ ಗದ್ದುಗೆಗೆ ನಮಿಸಿ ಬನ್ನಿ ಎಂಬ ಮಾತನ್ನು ತಪ್ಪದೆ ಹೇಳುತ್ತಿದ್ದಾರೆ. ವರ್ಷದ ಉದ್ದಕ್ಕೂ ಒಂದೆ ಒಂದು ಸಲ ಬಸವ ತತ್ವಗಳ ಚಿಂತನೆಯನ್ನು ಮಠಗಳು ನಡೆಸುವುದಿಲ್ಲ. ಬದಲಾಗಿ ತಳಬುಡವಿಲ್ಲ, ಅರ್ಥಕ್ಕೆ ನಿಲುಕದ , ಜನರನ್ನು ಮತ್ತಷ್ಟು ಮೌಢ್ಯಕ್ಕೆ ತಳ್ಳುವ, ಪವಾಡಗಳಿಂದ ತುಂಬಿ ತುಳುಕುವ ಪುರಾಣಗಳನ್ನು ಏರ್ಪಡಿಸುತ್ತಾರೆ. ಆಗ ಸುಮಂಗಲೆಯರಿಂದ ಆರತಿ ಮಾಡಿಸುವುದು, ತೊಟ್ಟಿಲು ಸಂಭ್ರಮ, ಪುರಾಣ ಮಂಗಲ ಇತ್ಯಾದಿಗಳಿಂದ ಜನರನ್ನು ಮತಿಹೀನರನ್ನಾಗಿ ಪರಿವರ್ತಿಸುತ್ತಾರೆ.

ತಾವು ಹಚ್ಚಿದ ಪುರಾಣದಲ್ಲಿ ನಡು ನಡುವೆ ಗುರು ದೊಡ್ಡವನು. ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ. ಹರ ಮುನಿದರೂ ಗುರು ಕಾಯುವನಯ್ಯಾ, ಜೀವನ ನಶ್ವರ, ಇರುವಾಗಲೆ ದಾನ ಮಾಡಬೇಕು ಎಂಬುದನ್ನು ಪದೆ ಪದೇ ಹೇಳುತ್ತ ಕೇಳುಗರಿಂದ ದುಡ್ಡನ್ನು ವಸೂಲಿ ಮಾಡುತ್ತಾರೆ. ಯಾವ ವ್ಯಕ್ತಿಯ ಪುರಾಣ ಹಚ್ಚಿರುತ್ತಾರೋ ಆ ವ್ಯಕ್ತಿಯ ತೊಟ್ಟಿಲು, ಬಟ್ಟೆ ಇತ್ಯಾದಿಗಳನ್ನು ಪುರಾಣದ ಕೊನೆಯಲ್ಲಿ ಹರಾಜು ಮಾಡಿ ದುಡ್ಡು ಕಮಾಯಿಸುತ್ತಾರೆ. ಹಣಕ್ಕಾಗಿ ಪುರಾಣ ಹೇಳುವ ಪುರಾಣಿಕ ಸಹಜವಾಗಿಯೆ ತಮಗೆ ಕರೆಯಿಸಿಕೊಂಡು ಪುರಾಣ ಹೇಳಲು ಹಚ್ಚಿದ ಮಠದ ಸ್ವಾಮಿಯ ಗುಣಗಾನ ಮಾಡುತ್ತಾನೆ. ಇಂದ್ರ ಚಂದ್ರ ಎಂದು ಹೊಗಳುತ್ತಾನೆ. ಪ್ರಸಕ್ತ ಸ್ವಾಮಿ ಮಾಡದ ಪವಾಡಗಳನ್ನು ಮಾಡಿದಂತೆ ಬಣ್ಣಿಸುತ್ತಾನೆ. ಹಾರ್ಮೋನಿಯಂ, ತಬಲ ಬಾರಿಸುವವರು ಎಲ್ಲರೂ ಸೇರಿ ಮುಖ್ಯ ಪಾತ್ರಧಾರಿಯಾದ ಸ್ವಾಮಿಯನ್ನು ಕೊಂಡಾಡುತ್ತಾರೆ. ಮಠದ ಸ್ವಾಮಿಯ ಘನಕಾರ್ಯವನ್ನು ಹೊಗಳಿದಷ್ಟು ಹಣ ಹರಿದು ಮಠದ ಸ್ವಾಮಿಯ ಉಡಿ ತುಂಬುತ್ತದೆ.

ಕೆಲವು ಮಠಗಳಲ್ಲಿ ಬೇಕಂತಲೆ ಮಠಾಧೀಶ ಮುದ್ದಾಂ ಆಗಿ ಭಕ್ತರನ್ನು ಕಾಣುವುದಿಲ್ಲ. ಮಠಕ್ಕೆ ಹೋದ ತಕ್ಷಣ ಮಠಾಧೀಶ ಕಂಡರೆ ಅದು ಮೌಲ್ಯವಲ್ಲ ಎಂದು ತಿಳಿದುಕೊಂಡು ಬೇಕಂತಲೆ ಸತಾಯಿಸಿ ದರ್ಶನ ಭಾಗ್ಯ ಕರುಣಿಸುತ್ತಾರೆ. ಒಮ್ಮೊಮ್ಮೆ ಆರಾಮವಾಗಿ ಮಠದ ಕೊಠಡಿಗಳಲ್ಲಿ ಏನೇನೋ ಮಾಡುತ್ತಾ ಮಲಗಿದ್ದರೂ ಸಹ ಹೊರಗಡೆ ತಮಗಾಗಿ ಕಾದಿರುವ ಜನಗಳನ್ನು ಕಾಣುವುದಿಲ್ಲ. ಭಕ್ತರು ಮಠಕ್ಕೆ ಹೋದಾಗಲೆಲ್ಲ ಸ್ವಾಮಿ ಸಿಗುವಂತ್ತಿದ್ದರೆ ಆ ಮಠದ ಮೌಲ್ಯ ಹಾಗೂ ಸ್ವಾಮೀಜಿಯ ಖದರು ಕೂಡ ಕಡಿಮೆಯಾಗುತ್ತದೆ ಎಂದು ಭಾವಿಸಿದವರೂ ಇದ್ದಾರೆ.

ಯಾವ ಮಠಾಧೀಶರನ್ನೂ ನೀವು ಅವರ ಹೆಸರು ಹಿಡಿದು ಕರೆಯುವಂತ್ತಿಲ್ಲ. ಆ ಹೆಸರುಗಳ ಹಿಂದೆ ಪೂಜ್ಯ ಶ್ರೀ. ಶ್ರೀ. ಶ್ರೀ. ಎಂದು ನಾಲ್ಕಾರು ಶ್ರೀಗಳನ್ನು ಹಚ್ಚಬೇಕು. ಅವರು ಪಡಕೊಂಡ ಡಾ. ಇಲ್ಲದೆ ನೀವು ಕರೆದಿರಾದರೆ ಅವರಿಗೆ ಒಳಗೊಳಗೆ ಗುದುಮುರುಗಿ ಸುರುವಾಗುತ್ತದೆ. ಖ್ಯಾತ ಚಿಂತಕ ಬರಹಗಾರ ಚಂದ್ರಶೇಖರ ಪಾಟೀಲ ಹೇಳುವಂತೆ ಭಕ್ತರ ತಲೆಯಲ್ಲಿ ಕಬ್ಬಿಣ ಇದೆ. ಸ್ವಾಮಿಗಳ ಪಾದದಲ್ಲಿ ಆಯಸ್ಕಾಂತಿಯ ಗುಣ ಇದೆ. ಆದ್ದರಿಂದ ಶಿಷ್ಯ- ಗುರುವಿನ ಪಾದ ಕಂಡಾಕ್ಷಣ ಅವು ಒಂದನ್ನೊಂದು ಆಕರ್ಷಿಸಿಸುತ್ತವೆ. ಕಾವಿ ಕಾಷಯಾಂಬರವ ಹೊದ್ದು ತಿರುಗುವ ಗಾವಿನ ಮುಖವ ನೋಡಲಾಗದು. ಅವರ ಮಾತು ಕೇಳಲಾಗದು ಎಂದು ಶರಣರು ಹೇಳಿದರೂ ಸಹ ನಾವಿಂದು ಕಾವಿ ಉಟ್ಟುಕೊಂಡು ಬಂದ ಒಬ್ಬ ಅಬ್ಬೆಪಾರಿಗೂ ಕಾಲು ಬೀಳಲೇಬೇಕಾದ ಪ್ರಸಂಗ ಎದುರಾಗಿದೆ. ನೀವು ಕಾಲು ಬೀಳದೆ ಹೋದರೆ ಗುರುಗುರಾಯಿಸಿ ನಿಮ್ಮ ಇತಿಹಾಸವನ್ನು ತಿಳಕೊಳ್ಳಲು ಯತ್ನಿಸುತ್ತಾರೆ.

ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ. ಚೆನ್ನಯ್ಯನ ಬೀಳುಡುಗೆಯ ಹೊದ್ದು ಬದುಕುವೆ. ಅಡ್ಡ ದೊಡ್ಡ ನಾನಲ್ಲವಯ್ಯಾ, ದೊಡ್ಡ ಬಸಿರು ಎನಗಿಲ್ಲವಯ್ಯಾ. ಮಾದಾರ ಚೆನ್ನಯ್ಯನ ಬಾಯ್ತಂಬುಲ ಮೆಲಿದು ಬದುಕುವೆ ಎಂದ ಬಸವಣ್ಣನವರ ತತ್ವಗಳ ವಾರಸುದಾರರಾಗಬಲ್ಲರೆ ? ಇಂದಿನ ಮಠಾಧೀಶರು ಎಂದು ಕ್ಷಣ ದಿಗಿಲಾಗುತ್ತದೆ. ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು, ಉಡುವಾತ ಬಲ್ಲನಲ್ಲದೆ. ಕವಿಯ ಮಾತು ಕವಿ ಬಲ್ಲನು. ನಾಲಗೆ ಬಲ್ಲುದು ರುಚಿಯ. ಭವ ದುಃಖಿಗಳೆತ್ತ ಬಲ್ಲನು ಲಿಂಗದ ಪರಿಯ ಎಂದು ಮಡಿವಾಳ ಮಾಚಿದೇವರು ಹೇಳಿದಂತೆ ಇವರೆಲ್ಲ ಬಹುತೇಕ ಮಡಿಯ ಹೇರಿದ ಕತ್ತೆಗಳಾಗಿದ್ದಾರೆ. ಲಿಂಗದ ಪರಿಯನ್ನು ಅರ್ಥವೇ ಮಾಡಿಕೊಂಡಿಲ್ಲ ಎಂದ ಮೇಲೆ ಅವನ್ನು ತಮ್ಮ ಭಕ್ತರಿಗೆ ಹೇಗೆ ವಿವರಿಸಿ ಹೇಳಬಲ್ಲರು ? ಸರಳತೆ ಇವರಲ್ಲಿ ದೀಪ ಹಚ್ಚಿ ಹುಡುಕಬೇಕು.

ದಿನ ವಾರ ತಿಥಿ ಮಿಥಿಗಳ ನೋಡುವವರು. ಮಿಥುನ ಮೇಷ ಕಟಕ ಸಿಂಹ ಎಂಬ ರಾಶಿಯ ನೋಡುವ ಗುರುಗಳಿವರು. ವಿತ್ತಾಪಹಾರಿ ಗುರುಗಳು ನೂರಾರು. ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು. ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವಿವ ಗುರುಗಳು ನೂರಾರು. ಸತ್ಯರ್ಮೋಪದೇಶವನರುಹಿ ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು. ವಿಚಾರ ಮುಖದಿಂದ ಷಟ್ಸಾದನೆಯನರುಹುವ ಗುರುಗಳು ನೂರಾರು. ಆದರೆ ತನ್ನರಿವೇ ತನಗೆ ಗುರು ಎಂದು ತಿಳಿಸುವ ಗುರುಗಳು ಯಾರಾದರೂ ಇದ್ದಾರೆಯೆ ? ಎಂಬ ಚೆನ್ನಬಸವಣ್ಣನವರ ಮಾತನ್ನು ನಾನಿಲ್ಲಿ ನೆನಪು ಮಾಡಿಕೊಳ್ಳಬಯಸಿದ್ದೇನೆ.

ಪಟ್ಟಭದ್ರ ಹಿತಾಸಕ್ತಿಯನ್ನು ಬೋಧಿಸುವ ಪಾಠಶಾಲೆಯಿಂದಲೆ ತಯಾರಾಗಿ ಬಂದಿರುವ ಈ ಮಠೀಯ ಗುರುಗಳಿಗೆ ವಚನ ಸಾಹಿತ್ಯ, ಸಮಕಾಲೀನ ಸಾಹಿತ್ಯದ ಅರಿವೇ ಇಲ್ಲ. ಹತ್ತೆಂಟು ಶ್ಲೋಕಗಳು, ನಾಲ್ಕಾರು ವಚನಗಳನ್ನು ಓದಿಕೊಂಡು ಆಶೀರ್ವಚನ ಮಾಡುವ ಕಲೆ ಕರಗತ ಮಾಡಿಕೊಂಡರೆ ಸಾಕು. ಯಾರಾದರೂ ಮಠಕ್ಕೆ ಗುರುವಾಗಬಹುದು ಎಂದು ಇಂದಿನ ಮಠಾಧೀಶರನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ. ಭವಿಷ್ಯ ಜೋತಿಷ್ಯ ವಾಸ್ತು ಶಾಸ್ತ್ರ ಹೇಳುವ ಮಠಾಧೀಶರೂ ನಮ್ಮ ನಡುವೆ ಇದ್ದಾರೆ. ಇವರ ಬಿಜಿನೆಸ್ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ ಹೊರತು. ಅದು ನಿಲ್ಲುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಹೂ ಹಣ್ಣು ಕಾಯಿ ಕರ್ಪೂರ ತೇರು ಲಕ್ಷ ದೀಪೋತ್ಸವ ಎಡೆ ಬಿಡದೆ ನಡೆದಿವೆ.

ತಮ್ಮನ್ನು ಅರಸಿ ಬರುವ ಭಕ್ತರಿಗೆ ಕಾರುಣ್ಯದ ಸಹಾಯ ಹಸ್ತ ಚಾಚಿ ತಬ್ಬಿಕೊಳ್ಳುವ ಗುರು ಎಲ್ಲಿದ್ದಾರೆ ? ಎಂದು ಹಗಲು ಹೊತ್ತಿನಲ್ಲಿ ದೀಪ ಹಿಡಿದು ಹುಡುಕುವ ಪ್ರಮೇಯ ಬಂದೊದಗಿದೆ. ಕುಲ ಸೂತಕ, ಮನ ಸೂತಕ, ತನು ಸೂತಕ , ನೆನಹು ಸೂತಕ ಕಳೆಯುವ ಗುರುಗಳನ್ನು ಇಂದು ಹುಡುಕುವುದು ಎಲ್ಲಿ ಎಂಬ ಪ್ರಶ್ನೆ ಬೃಹದಾಕಾರವಾಗಿ ಬೆಳೆಯುತ್ತಲೆ ಇದೆ. ಮಠಕ್ಕೆ ಸ್ವಾಮಿಯಾದವರು ಭಕ್ತರ ಮನೆಗಳಿಗೆ ಊಟಕ್ಕೆ ಬಂದು , ಮನೆ ಶಾಂತಿಯಲ್ಲಿ ಭಾಗವಹಿಸಿ, ಮದುವೆಯಲ್ಲಿ ಆರತಕ್ಷತೆ ಹಾಕಿ, ಸತ್ತಾಗ ಮಣ್ಣು ಹಾಕಿ ಹೋದರಷ್ಟೇ ಸಾಕು ಎಂಬ ವಿಚಾರಕ್ಕೆ ಭಕ್ತರು ಬಂದು ನಿಂತಾಗಿದೆ. ಯಥಾ ಗುರು ತಥಾ ಶಿಷ್ಯ ಎಂಬ ವಾಕ್ಯ ಇಂದು ಸಮಾಜವನ್ನು ಆಳುತ್ತಿದೆ.

ಆದ್ದರಿಂದ ಇಲ್ಲಿ ಮತ್ತೆ ಬಸವಣ್ಣನವರು ಕನಸಿದ ವಚನ ಸಂವಿಧಾನದ ಆಶಯಕ್ಕೆ ತಕ್ಕುದಾದ ಮಠಾಧೀಶರನ್ನು ಮಠಗಳನ್ನು ಹುಡುಕುವುದೆಂದರೆ ಕತ್ತಲಲ್ಲಿ ಕರಿಬೆಕ್ಕು ಹುಡುಕಿದಂತೆ ವ್ಯರ್ಥ. ಎಷ್ಟು ಸಾವಿರ ವರ್ಷವಾದರೂ ಯಥಾಸ್ಥಿತಿ ವಾದವನ್ನು ಒಪ್ಪಿಕೊಂಡಿರುವ ಮಠಗಳು ಹಾಗೂ ಅಲ್ಲಿನ ಪೀಠಾಧಿಕಾರಿಗಳು ಬದಲಾಗಲಾರರು. ಬದಲಾಗಬೇಕಾದುದು ಭಕ್ತರೆ ಹೊರತು ಅವರಲ್ಲವೇ ಅಲ್ಲ. ಎಲ್ಲಿ ಜಾಗೃತ ಭಕ್ತನಿರುತ್ತಾನೋ ಅಲ್ಲಿ ಖಂಡಿತ ಅರಿವನ್ನು ಕೊಡುವ, ನಮ್ಮ ಅಜ್ಞಾನ ಕಳೆಯುವ ಗುರು ಹುಟ್ಟಿಕೊಳ್ಳುತ್ತಾನೆ. ಏಕೆಂದರೆ ಮಠಾಧೀಶರು ಈಗಾಗಲೇ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾರೆ. ಭಕ್ತನ ಅಜ್ಞಾನ ಕಳೆದು ಜ್ಞಾನವನ್ನು ಕೊಡಲು ಅವರೇನು ಬಸವಾದಿ ಶರಣರೆ ?

0 ವಿಶ್ವಾರಾಧ್ಯ ಸತ್ಯಂಪೇಟೆ

5 thoughts on “ಭಕ್ತನ ಅಜ್ಞಾನ ಕಳೆದು ಜ್ಞಾನವನ್ನು ಕೊಡಲು ಮಠಾಧೀಶರೇನು ಬಸವಾದಿ ಶರಣರೆ ?

 1. ಭಕ್ತರೇ ಹೊತ್ತು ಕುಣಿಸುವಾಗ ಸ್ವಾಮಿಗಳು ಕುಣಿಯದೆ ಇದ್ದರೆ ಹೇಗೆ. ಆದಾಗ್ಯೂ ಕುಣಿಯಲಿಲ್ಲ ಎಂದು ಕೊಳ್ಳೀ ಅಂಥವರಿಗೆ ಕುಣಿಯಲು ಬರುವುದಿಲ್ಲವೆಂದು ಕಳ್ಳತನದ ಆರೋಪ ಹೊರಿಸಿ ಮಠದಿಂದ ಹೊರದೂಡುತ್ತಾರೆ. ಭಕ್ತರು ಬದಲಾಗದೆ ಹೊರತು ಮಠಾಧೀಶರು ಬದಲಾಗುವುದೇ ಇಲ್ಲ. ಭಕ್ತರ ಮನ ಪರಿವರ್ತನೆ ಮಾಡುವ ಕಾರ್ಯದಲ್ಲಿ ಪೀಠಾಧಿಪತಿಗಳದೇ ಮುಖ್ಯ ಪಾತ್ರ. ಈ ನಡುವೆ ಅಂಥಹ ಸ್ವಾಮಿಗೆ ಹುಚ್ಚನೆಂಬ ಪಟ್ಟ ಕಟ್ಟಿದರು ಅಚ್ಚರಿ ಪಡಬೇಕಿಲ್ಲ.

 2. ಕಂಡ ಕೂಡಲೇ ಸ್ವಾಮಿಗಳ ಕಾಲಿಗೆ ಎರಗುವ ಜನರಿಗೆ ಆ ಸ್ವಾಮಿಯೇ ಜಬರಿಸಿ “ಕೈ ಮುಗಿದು ತಲೆಬಾಗಿ ವಂದಿಸಿ ಸಾಕು”. ಎಂದು ಹೇಳಿದರೆ ಮಾತ್ರವೇ ಈ ಪದ್ಧತಿ ತೊಲಗಲು ಸಾಧ್ಯ. ಆದರೆ ಇದು ಅವರಿಗೆ ಬೇಡ! ಇಂಥಾ ಆತ್ಮ ವಂಚಕರು ಶರಣರ ಹೆಸರನ್ನು ಹೇಳಲೂ ಅಯೋಗ್ಯರು.

  1. ಹಿರಿಯ ಸಹೋದರರಾದ ಶ್ರೀ ಅಳಗುಂಡಿ ಅಂದಾನಯ್ಯ ಅವರಿಗೆ ಗೌರವದ ಶರಣುಗಳು
   ಲಿಂಗಾಯತ ಧರ್ಮದ ಮೂಲಧಾತುವನ್ನು ಅರಿಯದ ಗುರು- ಶಿಷ್ಯರಿಬ್ಬರ ಪರಿಸ್ಥಿತಿ ಬಳ್ಳಿಗುರುಡರು ಸೇರಿ ಹಳ್ಳಕ್ಕೆ ಬಿದ್ದರು ಎನ್ನುವಂತ್ತಿದೆ.
   ಲಿಂಗಾಯತ ಧರ್ಮ ಗುರು ಶಿಷ್ಯರ ನಡುವೆ ಗುಲಾಮಗಿರಿ ಇಲ್ಲ. ಅವರೀರ್ವರ ನಡುವೆ ಆತ್ಮೀಯ ಗೌರವ ಪೂರ್ವಕ ಬಾಂಧವ್ಯ ಇದೆ. ಗುರು ಮುಟ್ಟಿ ಗುರುವಾಗುವ ಪರಂಪರೆ ನಮ್ಮದು. ಆದರೆ ಆಗುತ್ತಿರುವುದು ಏನು ?

   ನಿಜ. ತಾವು ಅಂದಂತೆ ಶರಣರ ಹೆಸರು ಹೇಳಲೂ ಇವರೆಲ್ಲ ಅಯೋಗ್ಯರು. ತಮಗೆ ಶರಣಾರ್ಥಿಗಳು.

 3. ಈ ರೀತಿಯ ಲೇಖನ ಬರೆಯಲು ಗುಂಡಿಗೆ ಗಟ್ಟಿ ಇರಬೇಕು. ನೀವು ಗಂಡೆದೆಯ ಭಂಟ. ಗುರು ಮತ್ತು ಶಿಷ್ಯ ಇಬ್ಬರಲ್ಲೂ ಅರಿವಿನ ಕೊರತೆಯಿದೆ.

Leave a Reply

Your email address will not be published. Required fields are marked *

error: Content is protected !!