ಆತ್ಮ ಹತ್ಯೆಯೊಂದೆ ದಾರಿ ಎಂದು ಹಲವು ಸಲ ಯೋಚಿಸುತ್ತಿದ್ದೆ !

ಎದ್ದೇಳು ! ನಿರ್ಭೀತನಾಗು ! ಬಲಾಢ್ಯನಾಗು ! ಎಲ್ಲ ಹೊಣೆಗಾರಿಕೆಯನ್ನೂ ನಿನ್ನ ಹೆಗಲ ಮೇಲೆಯೇ ಹೊತ್ತುಕೊ. ನಿನ್ನ ಭವಿಷ್ಯದ ನಿರ್ಮಾಪಕ ನೀನೇ ಎಂಬುದನ್ನು ತಿಳಿದಿರು. ನಿನಗೆ ಅಗತ್ಯವಿರುವ ಎಲ್ಲ ಶಕ್ತಿ-ಸಾಮಥ್ರ್ಯಗಳೂ ನಿನ್ನೊಳಗೇ ಇವೆ. ಆದ್ದರಿಂದ ನಿನ್ನ ಭವಿಷ್ಯವನ್ನು ನೀನೇ ರೂಪಿಸಿಕೋ.

ಎಂಬ ಸ್ವಾಮಿ ವಿವೇಕಾನಂದ ಮಾತು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಓದುತ್ತಿರುವಂತೆ ನನ್ನೊಳಗೆ ಏನೋ ಸಂಚಲನ ಉಂಟಾದಂತಾಯಿತು. ಕೂದಲುಗಳು ನಿಮಿರಿದವು. ನನ್ನೊಳಗಿನ ಶಕ್ತಿ ಸಂಚಲಗೊಂಡಿತು. ಅಪ್ಪನ ಪರಲು ಹರಕೊಳ್ಳಬೇಕೆಂದು ಗಟ್ಟಿಯಾಗಿ ನಿರ್ಧರಿಸಿದೆ. ಅಂದು ಬೇಕಂತಲೆ ಅಪ್ಪನೊಂದಿಗೆ ತಗಾದೆ ತೆಗೆದೆ. ಏಕೆಂದರೆ ತಗಾದೆ ತೆಗೆಯದೆ ಹೋದರೆ ಅಪ್ಪನ ಕಕ್ಷೆಯಿಂದ ಹೊರಬರುವುದು ತುಂಬಾ ಕಷ್ಟ. ಆತ ಸೂಜಿಗಲ್ಲಿನಂತೆ ನನ್ನನ್ನು ಸೆಳೆಯಬಲ್ಲ. ಆತನ ಒಂದೆ ಒಂದು ಕಣ್ಣೀರಿನ ಹನಿಯಲ್ಲಿ ನಾನು ಮುಳುಗಿ ಹೋಗಬಲ್ಲೆ. ಅಪ್ಪನ ಕಕ್ಕುಲಾತಿಯ ತೆಕ್ಕೆಯಿಂದ ಬಿಡಿಸಿಕೊಳ್ಳಲು ಆಗದೆ ಇರುವ ಸಾಧ್ಯತೆ ಖಂಡಿತ ಇತ್ತು. ಹಾಗಾಗಿ ಒಲ್ಲದ ಮನಸ್ಸಿನಿಂದ ಆತನೊಂದಿಗೆ ಕಟುವಾಗಿ ವರ್ತಿಸಿದೆ.

ನನ್ನೊಳಗೆ ಹುದುಗಿರುವ ಸತ್ಯ ಸಂಗತಿಗಳನ್ನು ನಿಮ್ಮ ಮುಂದೆ ಹಂಚಿಕೊಂಡು ಬೆತ್ತಲಾಗುವ ತವಕ ಬಹಳ ದಿನಗಳಿಂದ ಇದ್ದೆ ಇತ್ತು. ಆದರೆ ಅದಕ್ಕೆ ನಾನೇ ಕಡಿವಾಣ ಹಾಕಿಕೊಂಡಿದ್ದೆ. ಆದರೆ ಹೇಳಲೇಬೇಕಾದ ತುರ್ತುನ್ನು ನನ್ನ ಕುಟುಂಬದ ಸದಸ್ಯರು ಒದಗಿಸಿದ್ದಾರೆ. ಅವರಿಗೆ ನಾನು ಋಣಿಯಾಗಿರುವೆ. ಅವರು ನನಗೆ ಆಗಾಗ ಕೊಟ್ಟ , ಕೊಡುತ್ತಿರುವ ಕಿರುಕುಳಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಆ ಬಸವಾದಿ ಶರಣರು ದಯಪಾಲಿಸಿದ್ದಾರೆ. ಅವರು ನನ್ನೆಡೆಗೆ ಎಸೆಗೆ ಕಲ್ಲುಗಳ ಮೇಲೆ ನಾನು ನಿಲ್ಲುತ್ತೇನೆ. ಟೀಕೆಗಳ ಮೇಲೆ ಸವಾರಿ ಮಾಡುತ್ತೇನೆ. ನನ್ನೆಡೆಗೆ ಎಸೆದ ಅವರ ಒಂದೊಂದು ಮಾತು ನನಗೆ ಮೆಟ್ಟಿಲುಗಳಾಗುತ್ತವೆ. ಶರಣರ ದಾರಿ ತುಂಬಾ ಕಠಿಣವಾದದ್ದು ಎಂಬುದು ನನಗೆ ಹೆಜ್ಜೆ ಹೆಜ್ಜೆಗೂ ಅರ್ಥವಾಗುತ್ತಿದೆ. ಯಾರಿಗೂ ಬಿರು ನುಡಿಯದೆ ಬದುಕುವುದು ತುಂಬಾ ಕಷ್ಟ. ಎಲ್ಲರೂ ನನ್ನ ಕಣ್ಣಿನಲ್ಲಿ ಬಳ್ಳು ಇಟ್ಟು ನೋಡುವವರೆ. ಎನಗಾರು ಇಲ್ಲ ಎನಗಾರು ಇಲ್ಲ ಎಂದು ಒಂದು ಕಡೆ ಅಂದರೂ ನನ್ನೊಳಗೆ ಸಹಸ್ರ ಸಹಸ್ರ ಹಾರೈಕೆಯ ಶರಣ ನುಡಿಗಡಣಗಳಿವೆ. ನೇರ ನಿಷ್ಠುರ ದಾರಿಗೆ ಕಲ್ಲು ಮುಳ್ಳುಗಳು ಸಹಜ ಎಂದು ನಂಬಿ ಮುನ್ನಡೆದಿರುವೆ. – ವಿಶ್ವಾರಾಧ್ಯ ಸತ್ಯಂಪೇಟೆ

ಏಕೆಂದರೆ ಅದಾಗಲೆ ಅಪ್ಪ ಹಲವಾರು ಸಲ ಮನೆಯ ಖರ್ಚನ್ನು ದೂಗಿಸಲಾಗದೆ ನನ್ನ ಮೇಲೆ ವಿನಾಕಾರಣ ಸಿಟ್ಟಾಗುತ್ತಿದ್ದ. ನಿಮ್ಮೆಲ್ಲರಿಗೆ ನಾನು ಎಷ್ಟು ದಿನ ಅಂತ ತಂದು ಹಾಕಬೇಕು ? ಕನಿಷ್ಟ ಪಕ್ಷ ನಿಮ್ಮ ಸಂಸಾರವನ್ನು ನೀವು ನೋಡಿಕೊಳ್ಳಲಾಗುವುದಿಲ್ಲವೆ ? ಎಂದೆನ್ನುತ್ತಿದ್ದ. ತಮಾಷೆಯ ಸಂಗತಿಯೆಂದರೆ ಅಪ್ಪನ ಜೊತೆ ಜೊತೆಗೆ ನಾನು ಅಗ್ನಿ ಅಂಕುರ ಪತ್ರಿಕೆಯನ್ನು ನೋಡಿಕೊಳ್ಳುತ್ತಿದ್ದೆ. ಮುದ್ರಿಸಲು ಹುಬ್ಬಳ್ಳಿಗೆ ಹೋಗುತ್ತಿದ್ದೆ. ಕಂಪೋಜ್, ಲೇ ಔಟ್ ಮಾಡುತ್ತಿದ್ದೆ. ಮುದ್ರಣಗೊಂಡ ಪತ್ರಿಕೆಗಳನ್ನು ಮನೆ ಮನೆಗೆ ತಲುಪುವಂತೆ ಅಂಚೆ ಮೂಲಕ ಕಳಿಸುತ್ತಿದ್ದೆ. ಆಗಾಗ ಅಪ್ಪನೊಂದಿಗೆ ವರದಿಗಾಗಿ ಓಡಾಡುತ್ತಿದ್ದೆ. ಆದರೆ ಅಪ್ಪ ನಾನು ಆತನೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಗೊತ್ತಿದ್ದೂ ಸಹ ನಾನು ಎಷ್ಟು ದಿನ ಅಂತ ನಿಮಗೆ ತಂದು ಹಾಕಬೇಕು ?! ಎಂದು ಅನ್ನುತ್ತಿದ್ದಾನಲ್ಲ !! ಎಂದು ಆಶ್ಚರ್ಯ ಹಾಗೂ ಅವಮಾನ ಎರಡೂ ಒಟ್ಟೊಟ್ಟಿಗೆ ಆದವು. ಆಶ್ಚರ್ಯ ಏಕೆಂದರೆ ಸತ್ಯ ಆತನಿಗೇ ಗೊತ್ತಿದೆ. ಅವಮಾನ ಏಕೆಂದರೆ ನನ್ನ ಹೆಂಡತಿ ಮಕ್ಕಳ ಮುಂದೆಯೆ ಅಪ್ಪ ಕಡ್ಡಿ ಮುರಿದಂತೆ ಹೀಗೆ ಮಾತನಾಡುತ್ತಾನಲ್ಲ ಎಂಬ ಸಂಕಟ.

ನಾನು ಅಪ್ಪನ ಪರಲು ಹರಕೊಂಡು ಹೋಗಬೇಕೆಂದು ನಿರ್ಧರಿಸಿದ ದಿನ ನನ್ನ ಹೆಂಡತಿ ಶರಾವತಿ ಸಹ ವಿರೋಧ ವ್ಯಕ್ತ ಪಡಿಸಿದಳು. ಒಂದೆರಡು ತಿಂಗಳು ಬೀಗರ ಮನೆಯಲ್ಲಿ ಆಶ್ರಯ ಪಡೆದು ಆ ನಂತರ ನನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮಾಡಿ, ಹೆಂಡತಿಯ ಮನೆಗೆ ಹೋರಟಿದ್ದರೆ ಆ ಅತ್ತೆ ನಿಮ್ಮ ಮನೆಯಲ್ಲಿ ಜಗಳವಾಡಿ ನಮ್ಮ ಮನೆಗೆ ಬರಬೇಡಿ ಎಂದೆನ್ನಬೇಕೆ ? ಅತ್ತ ದರಿ ಇತ್ತ ಹುಲಿ ಎಂಬ ಸಂದಿಗ್ಧ ಸ್ಥಿತಿ. ಕೊನೆಗೆ ಅದೇನನ್ನಿಸಿತೋ ಇರಲಿ ಈಗ ಬರ್ರಿ ನಾಲ್ಕೆಂಟು ದಿನ ಇದ್ದು ನಿಮ್ಮ ಮನೆಗೆ ಹೋಗುವಿರಂತೆ ! ಎಂಬ ಆಹ್ವಾನ ನನ್ನ ಸೊಸೆ ಹಾಗೂ ಅತ್ತೆಯಿಂದೆ. ಮನಸ್ಸು ನಿರುಮ್ಮಳವಾಯಿತು. ಆದರೆ ನನಗೆ ಅರಿಯದೆ ಒಳಗೊಳಗೆ ಮನಸ್ಸು ಗಾಳಿಗೊಡ್ಡಿದ ಪಟದಂತೆ ಪಟ ಪಟ ಬಡಿಯುತ್ತ ಓಡಾಡುತ್ತಿತ್ತು.

ಬಸವಮಾರ್ಗ ಹಾಗೂ ಅಗ್ನಿ ಅಂಕುರ ಪತ್ರಿಕೆಯ ಕೆಲಸ ಸಂಪೂರ್ಣ ನಾನು ಮಾಡಲಾರೆ ಎಂದು ಮನೆ ಬಿಟ್ಟು ಹೊರಟಿದ್ದಕ್ಕೆ ಅಪ್ಪ ನನ್ನ ಮೇಲೆ ವಿಪರಿತ ಸಿಟ್ಟಾಗಿದ್ದ. ಆತನ ಸಿಟ್ಟು ಕಂಡು ನನ್ನ ಸಹೋದರರೂ ಎಗರಾಡಿದರು. ಒಬ್ಬ ಸಹೋದರನಂತೂ ನಾನು ಇರುವಲ್ಲಿಗೆ ಬಂದು ನನ್ನನ್ನು ತದಕಬೇಕು ಎಂದು ಅಬ್ಬರಿಸಿ ಬೊಬ್ಬಿರಿದಿದ್ದ. ಎಮ್ಮೆಗೊಂದು ಚಿಂತೆ. ಸಮಗಾರಗೆ ಇನ್ನೊಂದು ಚಿಂತೆ ಎಂಬಂತೆ ಆತನ ವರ್ತನೆಗೆ ಮನಸ್ಸು ಬೇಸರಿಸಿತ್ತು. ಆದರೂ ನಾನು ಇವೆಲ್ಲವನ್ನು ಎದುರಿಸಲೆಬೇಕಾಗಿತ್ತು. ಮದುವೆಯಾಗಿ ಮಕ್ಕಳಾಗಿದ್ದರೂ ಸಹ ನನ್ನ ಸ್ವಂತಃ ದುಡಿಮೆ ಇರಲಿಲ್ಲ. ಅಪ್ಪನ ನೆರಳಿನಲ್ಲೆ ಬದುಕಬೇಕಾದ ದುಸ್ಥಿತಿ.

ಇಷ್ಟರಲ್ಲಾಗಲೆ ಶಹಾಪುರದಲ್ಲಿ ಶ್ರೀ. ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಕಟ್ಟಿ ಅದಿನ್ನು ಬೆಳೆಯುತ್ತಿತ್ತು. ಶ್ರೀ ಅಕ್ಕಮಹಾದೇವಿ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಒಂದರಡು ವರ್ಷವಾಗಿತ್ತು. ಅಪ್ಪನೊಡನೆ ನನ್ನ ನಂಟು ಸಹ ಹರಕೊಳ್ಳುವ ಸ್ಥಿತಿಯಲ್ಲಿಯೆ ಇವೆರಡೂ ಬ್ಯಾಂಕ್ ಗಳು ಆರಂಭಿಸಿದ್ದೆ. ಅಪ್ಪನಿಗೆ ಹಣಕಾಸಿನ ವ್ಯವಹಾರ ಅಂದರೆ ಆಗಲಾರದು. ಹಾಗಾಗಿ ಈ ಎರಡೂ ಸಂಸ್ಥೆಗಳನ್ನು ಸ್ಥಾಪಿಸುವಾಗ ಒಳಗೊಳಗೆ ಸಿಡಿಮಿಡಿಗೊಂಡ ಅಪ್ಪ ಏನೇನೋ ವ್ಯವಹಾರ ಮಾಡಿ ನನ್ನ ಮುಖಕ್ಕೆ ಮಸಿ ಬಳಿಯಬೇಡ. ನಿನ್ನ ಬದುಕನ್ನು ನೀನು ಕಟ್ಟಿಕೊಳ್ಳಲಾಗಿಲ್ಲ. ಬ್ಯಾಂಕ್ ಮಾಡಿ ಜನರನ್ನ ಉದ್ಧಾರ ಮಾಡ್ತಾನಂತೆ !! ಎಂದು ಹಲವು ಸಲ ವ್ಯಂಗ್ಯವಾಗಿ , ತಮಾಷೆಯಾಗಿ ಮಾತಾಡಿದ್ದ. ಸಹಕಾರ ಸಂಘ ಸಂಸ್ಥಾಪನೆಗೆ ಅಪ್ಪನಿಂದ ಬಿಡಿಗಾಸು ಪಡೆಯದೆ ಆರಂಭಿಸಿದ್ದೆ. ಜನರಿಂದ ಜನರಿಗಾಗಿ ಜನರೇ ನಡೆಸುವ ಸಂಸ್ಥೆಗೆ ವ್ಯಕ್ತಿಗತ ಬಂಡವಾಳದ ಅವಶ್ಯಕತೆ ಇಲ್ಲ ಎಂಬುದು ನನ್ನ ಅರಿವಿಗೆ ಬಂದಿತ್ತು. ಭಾಲ್ಕಿಯಲ್ಲಿ ನಮ್ಮ ಮಾವ ಸಿದ್ಧಲಿಂಗಪ್ಪ ಕಾಕನಾಳೆ ಸುಮಾರು ಅರವತ್ತು ವರ್ಷಗಳ ಹಿಂದೆಯೆ ಭಾಲ್ಕಿ ಅರ್ಬನ ಕೋ ಆಪ್ ಬ್ಯಾಂಕ್ ಸಂಸ್ಥಾಪಿಸಿ ಹೆಸರು ಮಾಡಿದ್ದ. ಅದರ ರಚನೆಯ ಬಗ್ಗೆ ಓದಿ ತಿಳಕೊಂಡಿದ್ದೆ. ಆದರೆ ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನೇನೋ ಸಂಸ್ಥಾಪಿಸಿ ಅದರ ಅಧ್ಯಕ್ಷನೇನೋ ಆದೆ. ಆದರೆ ಅದರಿಂದ ನನಗೆ ವ್ಯಕ್ತಿಗತ(ಆರ್ಥಿಕ)ವಾಗಿ ಬಿಡಿಗಾಸಿನ ಪ್ರಯೋಜನ ಇರಲಿಲ್ಲ. ನಾನೇ ಸಂಸ್ಥಾಪಿಸಿದ ಸಂಘದಲ್ಲಿ ನಾನೇ ಕೆಲಸಗಾರನಾಗಲಿಕ್ಕೂ ಸಾಧ್ಯವಿಲ್ಲ. ಇಷ್ಟು ಮಾತ್ರ ನನ್ನೊಳಗೆ ಅದಮ್ಯವಾದ ಆತ್ಮ ವಿಶ್ವಾಸವನ್ನು ಆ ಸಹಕಾರಿ ಸಂಘ ಉಂಟು ಮಾಡಿತ್ತು. ಕೇವಲ ಐದು ವರ್ಷಗಳಲ್ಲಿ ಸದರಿ ಸಂಘ ಎಲ್ಲರ ಗಮನ ಸೆಳೆದಿತ್ತು. ಜನರ ವಿಶ್ವಾಸಕ್ಕೆ ಪಾತ್ರವಾದ ಬ್ಯಾಂಕ್ ಸಹಜವಾಗಿ ಲಾಭವನ್ನು ಗಳಿಸಿಲಾರಂಭಿಸಿತ್ತು.

ಇದೆ ಸಂದರ್ಭದಲ್ಲಿ ನಾನು ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಂಕ್ ಮಾಡುವ ಆಲೋಚನೆ ಜನರಿಗೆ ಹೇಳುತ್ತಿರುವಂತೆಯೆ ಜನರೇ ನಾನು ಇರುವಲ್ಲಿಗೆ ಬಂದು ದುಡ್ಡು ಕೊಟ್ಟರು. ಆಗಲೂ ಅಪ್ಪನ ತಗಾದೆ, ಕೊಂಕು ಮಾತು ಇದ್ದೆ ಇತ್ತು. ನನ್ನ ಕಾಕಂದಿರಂತೂ ಅಪ್ಪನ ಜೊತೆ ನಾನು ಹೊಂದಿಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಿ ನನ್ನನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು. ಸಹೋದರರಂತೂ ನನ್ನ ಕಂಡರೆ ಕೆಂಡದಂತಹ ಕೋಪ ಮಾಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಮೈಮೇಲೆ ಏರಿ ಬರುತ್ತಿದ್ದರು. ಅಪ್ಪನೇ ಹಣಕೊಟ್ಟ ನಾನು ನಿಂತ ಕಟ್ಟಿಸಿದ ಮನೆಯ ಮೂರು ರೂಮ್ ಗಳನ್ನು ಸಹ ನನಗಾಗಿ ನೀಡದಾದರು. ಮನೆಗೆ ವಾಪಸ್ಸು ಬಂದರೆ ಕರೆದುಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. ನಾನು ಅಕ್ಷರಶಃ ರೋಡಿನಲ್ಲಿ ನಿಂತು ಒದ್ದಾಡುತ್ತಿದ್ದೆ. ಆತ್ಮ ಹತ್ಯೆಯೊಂದೆ ದಾರಿ ಎಂದು ಹಲವು ಸಲ ಯೋಚಿಸುತ್ತಿದ್ದೆ. ಆಗ ನನ್ನ ಕಣ್ಣುಗಳ ಮುಂದೆ ವಿವೇಕಾನಂದರ ಮಾತುಗಳು ಸುಳಿದು ಹೋಗುತ್ತಿದ್ದವು. ಮುದ್ದಾದ ಮಡದಿ- ಮಕ್ಕಳು ಕಣ್ಣುಂದೆ ಸುಳಿದಾಡುತ್ತಿದ್ದರು.


( ಮುಂದುವರೆಯುವುದು)

3 thoughts on “ಆತ್ಮ ಹತ್ಯೆಯೊಂದೆ ದಾರಿ ಎಂದು ಹಲವು ಸಲ ಯೋಚಿಸುತ್ತಿದ್ದೆ !

 1. ವಿಶ್ವಗುರುವಿನ ಮಾರ್ಗದಲಿ ಪಯಣಿಸುತ್ತಿರುವ ವಿಶ್ವಾರಾಧ್ಯರೆ,
  ತಾವು ಅಕ್ಷರೀಕರಿಸಿದ ಬದುಕಿನ ಕಹಿಸತ್ಯವನ್ನು ಓದಿದ ಬಳಿಕ ಏನೆಂದು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯದಂತಾಗಿದೆ. ಏನಾದರೂ ವಿಭಿನ್ನವಾಗಿ ಮಾಡಲು ಹೊರಟವರಿಗೆ, ವಿಭಿನ್ನವಾಗಿ ಚಿಂತಿಸುವವರಿಗೆ ಹೀಗೇಕೆ ಅಸಂಖ್ಯ ಎಡರು-ತೊಡರುಗಳು ಎದುರಾಗುತ್ತವೆ ಎಂಬುದೊಂದು ಯಕ್ಷ ಪ್ರಶ್ನೆ. ಆಶ್ಚರ್ಯಕರ ಸಂಗತಿಯೆಂದರೆ ನಮ್ಮವರೇ ನಮಗೆ ಒಡ್ಡುವ ಅಗ್ನಿ ಪರೀಕ್ಷೆಗಳು ಈ ಸಂಬಂಧಗಳ ಟೊಳ್ಳುತನವನ್ನು ಬಯಲು ಮಾಡುತ್ತವೆ ಅಂತಾ ಅನಿಸುತ್ತದೆ. ‌ ತಮ್ಮ ಬರಹ ನಮಗೆ ಬೆಳಗನ್ನು ಹಾಗೆಯೇ ಬೆಳಕನ್ನು ತೋರುತ್ತಿದೆ,
  ‘ಬೆಂಕಿಯಲ್ಲಿ ಬೇಯದೇ ಬಂಗಾರ ಶುದ್ಧವಾಗದು’ ಅಲ್ಲವೆ ?
  ಬಸವಾದಿ ಪ್ರಮಥರ ಕೃಪೆ ತಮಗಿದೆ.
  ತಮಗೆ ಶುಭವಾಗಲಿ.
  ಶರಣು ಶರಣಾರ್ಥಿ.

Leave a Reply

Your email address will not be published. Required fields are marked *

error: Content is protected !!