ಬಚ್ಚಲಲ್ಲಿ ಎಲ್ಲರೂ ಬೆತ್ತಲೆ !

ಒಲುಮೆಯ ಕೂಟಕ್ಕೆ ಯಾವ ಅಪ್ಪಣೆ ಬೇಕು ?

ಮನುಷ್ಯ ಹಾಗೂ ಪ್ರಾಣಿಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಕೆಲವು ವಿಷಯಗಳನ್ನು ಮನುಷ್ಯ ಗೌಪ್ಯವಾಗಿ ಇಡಬಲ್ಲ. ಯಾರಿಗೂ ಗೊತ್ತಾಗದಂತೆ ಮಾಡಬಲ್ಲ. ಸುಳ್ಳು ಮೋಸ ವಂಚನೆಗಳನ್ನೂ ಸಹ ಯಾವ- ಯಾರ ಎಗ್ಗಿಲ್ಲದೆ ನಡೆಸಬಲ್ಲ. ಕೊಲೆಯನ್ನು ಮಾಡಿಯೂ ಮಾಡದಂತೆ ಮುಖವಾಡ ಹಾಕಬಲ್ಲ. ಅತ್ಯಾಚಾರ ಮಾಡಿಯೂ ಏನೂ ಮಾಡಿಲ್ಲವೆಂದು ಸೋಗು ಹಾಕಬಹುದು. ದರೋಡೆ ಮಾಡಿ ಸಾಚಾ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳಬಲ್ಲ. ಸಾಕಷ್ಟು ಮುಖವಾಡಗಳನ್ನು ತೊಟ್ಟುಕೊಂಡ ಮನುಷ್ಯ ಆ ಮುಖವಾಡಗಳ ಮೇಲೆ ಒಳ್ಳೆಯವನು ಕೆಟ್ಟವನು ಎಂದು ನಮ್ಮ ಸಮಾಜ ನಂಬಿಕೊಂಡು ಹೊರಟಿದೆ.

ತೀರಾ ಇತ್ತೀಚೆಗೆ ನಡೆದ ಲೈಂಗಿಕ ಕ್ರಿಯೆಗಳ ವಿಡಿಯೋ ತುಣುಕುಗಳು ಹೆಚ್ಚು ಸದ್ದು ಮಾಡಿವೆ. ದೃಶ್ಯ ಮಾಧ್ಯಮವನ್ನು ಇನ್ನು ಮುಂದೆ ನಡುಮನೆಯ ಅಂಗಳದಲ್ಲಿಟ್ಟು ನೋಡುವ ಕಾಲ ಇದಲ್ಲ ಎಂದು ಸಾಬೀತಾಗಿದೆ. ಮೂರ್ನಾಲ್ಕು ದಿನಗಳಾದರೂ ಸಹ ಅವುಗಳ ಆರ್ಭಟ ನಿಂತಿಲ್ಲ. ಬಹುಶಃ ಆ ವ್ಯಕ್ತಿ ಬದುಕಿರುವವರೆಗೂ ಅದು ನಿಲ್ಲುವುದಿಲ್ಲ. ಅವರ ಹೆಸರು ನೆನಪಾಗುತ್ತಲೆ ಆ ಸಿಡಿಯ ದೃಶ್ಯಗಳು ನಮ್ಮ ಕಣ್ಣ ಮುಂದೆ ಬಿತ್ತರವಾಗುವಷ್ಟು ನಾವೆಲ್ಲ ನೋಡಿ ಆಗಿದೆ. ಸಾರ್ವಜನಿಕ ಜೀವನದಲ್ಲಿದ್ದ ವ್ಯಕ್ತಿ ಮೇಲ್ಗಡೆ ಕುಳಿತಿರುವುದರಿಂದ ಸಹಜವಾಗಿ ಆತನ ನಡೆ ನುಡಿಗಳಲ್ಲಿ ಹೆಚ್ಚು ಪಾರದರ್ಶಕವಾಗಿರಬೇಕು ಎಂದು ಪ್ರತಿಪಾದಿಸುವವರಲ್ಲಿ ನಾನೂ ಒಬ್ಬ. ಆದರೆ ವ್ಯಕ್ತಿಯೋರ್ವನ ಖಾಸಗಿ ಬದುಕಿನಲ್ಲಿ ಹೊಕ್ಕು ಆತನನ್ನು ಸಮಾಜ ದ್ರೋಹಿ ಎಂದು ಬಿಂಬಿಸುವ ಅಧಿಕಾರವನ್ನು ಯಾರು ಕೊಟ್ಟರು ?

ಲೈಂಗಿಕ ಕಾಮ ಕೇಳಿಯಲ್ಲಿ ಭಾಗಿಯಾದ ವ್ಯಕ್ತಿಗೂ ಹೆಂಡತಿ ಮಕ್ಕಳು ಬಂಧು ಬಾಂಧವರು ಎಲ್ಲಾ ಇದ್ದಾರೆ. ಅವರೆಲ್ಲ ಮನಸ್ಸು ಎಷ್ಟು ಕುಗ್ಗಿ ಹೋಗಿರಬಹುದು. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ವಿಧಿಸುವುದು ಸರಿಯೆ ? ಇಷ್ಟಕ್ಕೂ ಬಹುತೇಕ ವಿಡಿಯೋಗಳನ್ನು ನೋಡಿದರೆ ಸಂತ್ರಸ್ತೆಯನ್ನು ಒತ್ತಾಯದಿಂದ ಮಂಚಕ್ಕೆ ಎಳೆದಂತೆ ಕಾಣುತ್ತಿರುವುದಿಲ್ಲ. ಒತ್ತಾಯವಿಲ್ಲದ, ಪರಸ್ಪರ ಒಪ್ಪಿಗೆಯಿಂದ ನಡೆದ ಲೈಂಗಿಕ ಕ್ರಿಯೆಗೆ ಕಾನೂನು ಸಹ ಮೌನವಹಿಸುತ್ತದೆ.

ಆದ್ದರಿಂದ ಇಂಥ ಲೈಂಗಿಕ ಕ್ರಿಯೆಯ ಹಗರಣಗಳು ಬಯಲಿಗೆ ಬಂದಾಗ ಅವು ನೇರ ಮಾಧ್ಯಮಗಳಿಗೆ ಹೋಗದ ನಿರ್ಬಂಧ ವಿಧಿಸಬೇಕು. ಅಥವಾ ಮಾಧ್ಯಮಗಳು ತಮಗೆ ತಾವೇ ನಿರ್ಬಂಧ ವಿಧಿಸಿಕೊಂಡು ಸಮಾಜದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ಕಡಿವಾಣ ಹಾಕಿಕೊಳ್ಳಬೇಕು. ಸುಪ್ರಿಂಕೋರ್ಟನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮೀಟಿಯೊಂದು ರಚಿಸಿ ಆ ತಂಡದ ತೀರ್ಮಾನದಂತೆ ಶಿಕ್ಷೆ ಕೊಡಬೇಕು. ಅಲ್ಲಿಯವರೆಗೂ ದೃಶ್ಯ ಮಾಧ್ಯಮಗಳು ಆ ಕಡೆ ಮುಖವಿಟ್ಟು ನೋಡದಂತೆ ತಡೆಯಬೇಕಿದೆ. ಇಲ್ಲದೆ ಹೋದರೆ ಸಾರ್ವಜನಿಕವಾಗಿ ಸಣ್ಣ ಪುಟ್ಟ ಮಕ್ಕಳ ಸಮೇತ ಮುಂದೊಂದು ದಿನ ಇಂಥ ದೃಶ್ಯಗಳನ್ನು ದಿನವೂ ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಮಠಾಧೀಶ, ರಾಜಕಾರಣಿ, ಸಾಹಿತಿ, ಸಮಾಜ ಕಾರ್ಯಕರ್ತ ಯಾರೇ ಆಗಿರಲಿ ಆತನ ಒಪ್ಪಿತವಾದ ಲೈಂಗಿಕ ದೃಶ್ಯಗಳನ್ನು ಮಾಧ್ಯಮಗಳಿಗೆ ಹಠಾತ್ತನೆ ಬಿಡುಗಡೆ ಗೊಳಿಸುವುದು ತರವಲ್ಲ ಎಂದು ನನಗನಿಸುತ್ತದೆ. ಬಚ್ಚಲಲ್ಲಿ ಎಲ್ಲರೂ ಬೆತ್ತಲೆ ಎನ್ನುವಂತೆ ಮನುಷ್ಯ ಸಹಜ ಲೈಂಗಿಕ ಕಾಮನೆಗಳು ಎಲ್ಲರಲ್ಲೂ ಇರುವಂಥವೆ. ನಾವು ನಿತ್ಯ ನಡಕೊಳ್ಳುವ ದೇವರ ಗುಡಿಗಳ ಶಿಲ್ಪಗಳನ್ನು ಕಣ್ತೆರೆದು ನೋಡಿದರೆ ಕಾಣುವುದೆ ವಾತ್ಸಾಯನನ ಕಾಮ ಸೂತ್ರಗಳ ನಗ್ನ ಚಿತ್ರಗಳು. ಶಿವ ಮತ್ತು ಪಾರ್ವತಿಯ ಸಮಾಗಮದ ಚಿತ್ರವೇ ಗುಡಿಯಲ್ಲಿರುವ ಈಶ್ವರ ಲಿಂಗ ಹಾಗೂ ಪೀಠಕ ಎಂದು ಹೇಳುವ ಒಂದು ವಾದವನ್ನು ನಾವಿಲ್ಲಿ ಗಮನಿಸಬಹುದು. ಮನುಷ್ಯ ಹುಟ್ಟಿದ್ದು ಬೆಳೆದಿರುವುದು, ಬೆಳೆಯುತ್ತಿರುವುದು ಸಹ ಲೈಂಗಿಕ ಕ್ರಿಯೆಗಳಿಂದ ಎಂಬುದು ಎಲ್ಲರೂ ಒಪ್ಪಬೇಕಾದ ಸತ್ಯ. ಹಾಗಂತ ಕಂಡ ಕಂಡವರೊಡನೆ ಅನಿರ್ಬಂಧಿತ ಕಾಮಕೇಳಿಯನ್ನು ನಡೆಸಬೇಕು ಎಂಬ ವಾದವೂ ನನ್ನದಲ್ಲ. ಎರಡು ಜೀವಗಳ ನಡುವೆ , ಖಾಸಗಿ ಕೋಣೆಯಲ್ಲಿ ನಡೆಯುವ ಕ್ರಿಯೆ ಸಾರ್ವತ್ರಿಕವಾಗಿ ಕಾಣಿಸಿಕೊಳ್ಳಬಾರದು ಎಂಬುದು ನನ್ನ ಅರಿವು. ಸಮಾಜದ ಮುಂದಿನ ನಾಗರಿಕರಾಗುವ ನಮ್ಮ ಮನೆಯ ಸಣ್ಣ ಸಣ್ಣ ಮಕ್ಕಳು ಈ ಚಟುವಟಿಕೆಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡುವುದರಿಂದ ಅವರ ಮನಸ್ಸಿನಲ್ಲಾಗುವ ತವಕ ತಲ್ಲಣಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ.

ಈ ಕುರಿತು ನಾಗರಿಕ ಸಮಾಜ ಸೃಷ್ಟಿಸಿರುವ ವಿಧಾನ ಸೌಧಗಳು, ಸುಪ್ರಿಂಕೋರ್ಟ, ಹೈಕೋರ್ಟಗಳು, ಧಾರ್ಮಿಕ ಕೇಂದ್ರಗಳು, ಚಿಂತಕರು ಮುಕ್ತವಾಗಿ ಚರ್ಚಿಸಬೇಕಿದೆ. ಮುಕ್ತವಾದ ಮನಸ್ಸು ಸಮಾಜವನ್ನು ಚಲನಶೀಲಗೊಳಿಸುತ್ತದೆ. ಮೃತ ಮನಸ್ಸು ತನ್ನ ಸುತ್ತ ಮುತ್ತ ರೋಗಕ್ರಿಮಿಗಳನ್ನು ಸಾಕುತ್ತದೆ ಎಂಬ ಮಾತನ್ನು ನಾನಿಲ್ಲಿ ಜ್ಞಾಪಿಸಿ, ಈ ಬಗೆಗಿನ ಚರ್ಚೆಗೆ ಮುನ್ನುಡಿ ಬರೆಯುತ್ತಿರುವೆ. ಆಸಕ್ತ ಬರಹಗಾರರು ಪ್ರತಿಕ್ರಿಯೆಯನ್ನು ನೀಡಬೇಕು. ಸಮಾಜದಲ್ಲಿ ಉಂಟಾಗಿರುವ ಉಂಟು ಮಾಡುತ್ತಿರುವ ಮಾಧ್ಯಮಗಳ ಡೊಂಬರಾಟವನ್ನು ನಿಲ್ಲಿಸಬೇಕಿದೆ.

ಕಾಯ ಬತ್ತಲೆಯಾಗಿ ಕಾಣಿಸಿಕೊಳ್ಳುವ ಎಷ್ಟೋ ಮಠಾಧೀಶರೂ ಸಹ ಲೈಂಗಿಕ ಆರೋಪಗಳಿಗೆ ಗುರಿಯಾದದ್ದು ಇದೆ. ಮಂಡೆ ಬೋಳಿಸಿಕೊಂಡು ತಿರುಗಾಡುವ ಸ್ವಾಮೀ ಮಹಾಸ್ವಾಮಿಗಳೆಲ್ಲ ಹೆಣ್ಣೆಂಬ ಮಾಯೆ(ಆಸೆ)ಯ ಮುಂದೆ ಬೊಕ್ಕ ಬೋರಲ ಬಿದ್ದಾಗಿದೆ. ಮನುಷ್ಯ ಪ್ರಾಣಿಯಾಗಿರುವ ಎಲ್ಲರೂ ಒಳಗೊಳ್ಳುವ ಕ್ರಿಯೆ ಇದಾಗಿರುವುದರಿಂದ ಸಹಜವಾಗಿ ನಡೆಯುವಂಥದ್ದು. ಆದರೆ ಕೇವಲ ಮಠಾಧೀಶರು ಮಾತ್ರ ಈ ಮೋಹದ ಬಲೆಯಿಂದ ಹೊರಗಿಡುವು ತರವಲ್ಲವೆಂಬುದು ನನ್ನ ವಾದ. ಒಂದು ಸಲ ಈ ಆಸೆ ಮನಸ್ಸಿನ ಮೂಲೆಯಲ್ಲಿ ಕುಳಿತುಕೊಂಡಿತು ಎಂದರೆ ಅದು ತನ್ನ ಹಿಡಿತವನ್ನು ವ್ಯಕ್ತಿಯ ಮೇಲೆ ಸಾಧಿಸುತ್ತಲೆ ಹೋಗುತ್ತದೆ. ಸಾಧ್ಯವಾಗದಿದ್ದರೆ ಅದು ಒಂದಲ್ಲ ಒಂದು ಸಲ ಸ್ಪೋಟಗೊಳ್ಳುತ್ತದೆ. ‘ಕಾಮಾತುರಂ ನ ಲಜ್ಜಂ. ನ ಭಯಂ’ ಎಂಬಂತಾಗುತ್ತದೆ. ‘ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು’ ಎಂದು ಅಕ್ಕಮಹಾದೇವಿ ತಾಯಿ ಹೇಳಿದ್ದನ್ನು ನಾನಿಲ್ಲಿ ನೆನೆಯ ಬಯಸುತ್ತೇನೆ.

ಕಾಮವನ್ನು ತ್ಯಜಿಸಿದ ವ್ಯಕ್ತಿ ಬಹು ದೊಡ್ಡವನು ಎಂದು ನಿರ್ಧಾರಿಸುವ ಮಾಪನವೇ ಸರಿಯಾದುದಲ್ಲ. ಅದು ನಿಸರ್ಗ ಕ್ರಿಯೆಗೆ ವಿರೋಧವಾದ ತತ್ವ. ಹಸಿವು ತೃಷೆ ನೀರು ದೇಹಕ್ಕೆ ಎಷ್ಟು ಸಹಜವೋ ಅಷ್ಟೇ ಸಹಜ ಕಾಮ. ಕಾಮವನ್ನು ಗೆಲ್ಲವುದು ಸುಲಭದ ಮಾರ್ಗವಲ್ಲ. ಅದು ಕಲ್ಲು ಮುಳ್ಳುಗಳಿಂದ ಆವೃತವಾದ ದಾರಿ. ತನ್ನನ್ನು ತಾನು ಯಾರು ಗೆಲ್ಲುವರೋ ಅವರು ಕಾಮವನ್ನೂ ಗೆಲ್ಲಬಲ್ಲರು. ಆದರೆ ಇಂಥ ವ್ಯಕ್ತಿಗಳು ಇಂದು ಯಾರಿದ್ದಾರೆ ? ಎಂಬುದು ಯಕ್ಷ ಪ್ರಶ್ನೆ. ನೀರು ಕುಡಿಯದೆ, ಶ್ವಾಶೋಚ್ಛಾಸವನ್ನು ನಡೆಸದೆ, ಉಣ್ಣದೆ ಜೀವಂತ ಇದ್ದಾನೆ ಎಂಬುದು ಎಂಥ ಪವಾಡವೋ ಹಾಗೆಯೆ ಕಾಮವನ್ನು ಗೆದ್ದಿದ್ದೇನೆ ಎಂದು ಹೇಳುವುದು ಸಹ. ನಿದ್ರೆ ನೀರಡಿಕೆ ಹಸಿವೆಗಳನ್ನು ಗೆದ್ದವರು ಸಹಜ ಜೀವಿಗಳು ಎಂದು ಕರೆಯುವುದು ಕಷ್ಟ. ಇಂಥವರು ಅಪರೂಪದ ಜೀವಿಗಳು ಎನ್ನಬೇಕು. ಮತ್ತು ಅಬ್ ನಾರ್ಮಲ್ ಆದ ಜೀವಗಳೂ ಎಂದು ಹೆಸರಿಸಬಹುದು. ಅಥವಾ ಈತನಲ್ಲಿ ಎಲ್ಲರಲ್ಲಿರುವಂತೆ ದೈಹಿಕ ಬೆಳವಣಿಗೆ ಆರೋಗ್ಯ ಪೂರ್ಣವಾಗಿಲ್ಲ ಎಂದು ತಿಳಕೊಳ್ಳಬೇಕು. ನಿದ್ರೆ ಮಾಡದೆ, ನೀರು ಕುಡಿಯದೆ, ಗಾಳಿಯನ್ನು ಸೇವಿಸದೆ ಜೀವಿಸಬಲ್ಲ ಎಂಬುದು ಹೇಗೆ ಅನಾರೋಗ್ಯ ಪೂರ್ಣ ಮತ್ತು ಸತ್ಯವಿಲ್ಲದ ಮಾತೋ ಹಾಗೆಯೇ ಮೈಥುನವಿಲ್ಲದೆ ಬದುಕುತ್ತಾನೆ ಎಂದು ಹೇಳುವುದು ಸಹ ಬೊಗಳೆ. ಮೇಲ್ನೋಟಕ್ಕೆ ಕೆರೆಗೆ ಏರಿ ಕಟ್ಟಿ ನೀರು ನಿಲ್ಲುವಂತೆ ತಡೆ ಒಡ್ಡಿದ್ದರೂ ಸಹ ಎಲ್ಲೋ ಒಂದು ಕಡೆ ಸಣ್ಣಗೆ ನೀರು ಹರಿದು ಹೋಗಲು ತೂಬು ಬಿಟ್ಟಿರಲೇಬೇಕಾಗುತ್ತದೆ. ಇಲ್ಲದೆ ಹೋದರೆ ಆ ಕೆರೆ ಏರಿ ಎಲ್ಲರೂ ನೋಡ ನೋಡುತ್ತಿರುವಂತೆ ಒಡೆದು ಹೋಗುತ್ತದೆ.

ವಿಶ್ವಾಮಿತ್ರ ಮಹಾ ತಪಸ್ವಿ – ಜ್ಞಾನಿ. ಆದರೆ ಮೇನಕೆಯ ಕಾಲ್ಗೆಜ್ಜೆಯ ನಾದಕ್ಕೆ ಮನಸೋಲಲಿಲ್ಲವೆ ? ಮೇನಕೆಯ ವಯ್ಯಾರಕ್ಕೆ ಸೋತ ಮಾತ್ರಕ್ಕೆ ವಿಶ್ವಾಮಿತ್ರ ಜ್ಞಾನಿ ಅಲ್ಲ. ತಪಸ್ವಿ ಅಲ್ಲ ಅನ್ನಲಾಗುತ್ತದೆಯೆ ? ಹಾಗಂತ ಕಂಡ ಕಂಡವರ ಮೇಲೆ ಮನಸ್ಸಾಯಿತೆಂದು ಅವರ ಮೇಲೆ ಏರಿ ಹೋಗುವುದನ್ನು ನಾನು ಸಮರ್ಥಿಸಲಾರೆ. ಆದರೆ ಮನುಷ್ಯನಲ್ಲಿ ಸಹಜವಾಗಿ ಕಾಮದ ವಾಸನೆ ಇದೆ. ಗಂಡು ಹೆಣ್ಣಿನ ನಡುವೆ ಕಾಮವೊಂದು ಇಲ್ಲದೆ ಹೋಗಿದ್ದರೆ ಅವರು ಪರಸ್ಪರರನ್ನು ಅಪ್ಪಿಕೊಂಡು- ಒಪ್ಪಿಕೊಂಡು ಮನೆ ಮಠ ಕಟ್ಟಿಕೊಂಡು ಇರುತ್ತಿರಲಿಲ್ಲ. ಹೆಣ್ಣು ಗಂಡುಗಳು ಸಂತಾನ ಬೆಳವಣಿಗೆ – ವ್ಯಕ್ತಗತ ಸುಖಕ್ಕೆ ಪೂರಕವಾಗಿ ಇರಲೇಬೇಕು.

ಆದ್ದರಿಂದ ಹೆಣ್ಣು ಗಂಡಿನ ನಡುವೆ ನಡೆಯುವ ಒಪ್ಪಿತವಾದ ಲೈಂಗಿಕ ಕ್ರಿಯೆಗೆ ಅಷ್ಟು ಪ್ರಾಧಾನ್ಯತೆ ನೀಡುವುದು ಎಷ್ಟು ಸರಿ ? ಹೆಣ್ಣು ಗಂಡಿನ ಮಿಲನೋತ್ಸವದಿಂದ ವ್ಯಕ್ತಿಯೊಬ್ಬನ ಚಾರಿತ್ರ್ಯ ಒಳ್ಳೆಯದು ಕೆಟ್ಟದ್ದು ಎಂದು ನಿರ್ಧರಿಸುವುದು ಹೇಗೆ ಸರಿಯಾದೀತು ? ಹೆಣ್ಣಿನ ಅಥವಾ ಗಂಡಿನ ಒಪ್ಪಿಗೆ ಇಲ್ಲದೆ ನಡೆಯುವ ಮಿಲನೋತ್ಸವಕ್ಕೆ ಕಾನೂನು ಕಟ್ಟಳೆ ಇದೆ. ಅದು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ. ವ್ಯಕ್ತಿಯೊಬ್ಬನ ತಪ್ಪು ತಪ್ಪೆಂದು ಕೋರ್ಟ ಹೇಳುವುದಕ್ಕಿಂತ ಪೂರ್ವದಲ್ಲಿಯೆ ಆತನ ಮಾನ ಹರಾಜು ಹಾಕುವುದು ಎಷ್ಟು ಸರಿ ? ನಾವೆಲ್ಲ ಈ ಬಗ್ಗೆ ಮುಕ್ತವಾಗಿ ಆಲೋಚಿಸಬೇಕಾಗಿದೆ. ‘ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ’ ಎಂಬ ಮಾತು ನೂರಕ್ಕೆ ನೂರು ಒಪ್ಪಿತವೆ. ಆದರೂ ಆಕಸ್ಮಿಕವಾಗಿ ಕುದುರಿದ ಒಲುಮೆಯ ಕೂಟಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು ?

ಈ ಕುರಿತು ನಾಗರಿಕ ಸಮಾಜ ಸೃಷ್ಟಿಸಿರುವ ವಿಧಾನ ಸೌಧಗಳು, ಸುಪ್ರಿಂಕೋರ್ಟ, ಹೈಕೋರ್ಟಗಳು, ಧಾರ್ಮಿಕ ಕೇಂದ್ರಗಳು, ಚಿಂತಕರು ಮುಕ್ತವಾಗಿ ಚರ್ಚಿಸಬೇಕಿದೆ. ಮುಕ್ತವಾದ ಮನಸ್ಸು ಸಮಾಜವನ್ನು ಚಲನಶೀಲಗೊಳಿಸುತ್ತದೆ. ಮೃತ ಮನಸ್ಸು ತನ್ನ ಸುತ್ತ ಮುತ್ತ ರೋಗಕ್ರಿಮಿಗಳನ್ನು ಸಾಕುತ್ತದೆ ಎಂಬ ಮಾತನ್ನು ನಾನಿಲ್ಲಿ ಜ್ಞಾಪಿಸಿ, ಈ ಬಗೆಗಿನ ಚರ್ಚೆಗೆ ಮುನ್ನುಡಿ ಬರೆಯುತ್ತಿರುವೆ. ಆಸಕ್ತ ಬರಹಗಾರರು ಪ್ರತಿಕ್ರಿಯೆಯನ್ನು ನೀಡಬೇಕು. ಸಮಾಜದಲ್ಲಿ ಉಂಟಾಗಿರುವ ಉಂಟು ಮಾಡುತ್ತಿರುವ ಮಾಧ್ಯಮಗಳ ಡೊಂಬರಾಟವನ್ನು ನಿಲ್ಲಿಸಬೇಕಿದೆ.

0 ವಿಶ್ವಾರಾಧ್ಯ ಸತ್ಯಂಪೇಟೆ

4 thoughts on “ಬಚ್ಚಲಲ್ಲಿ ಎಲ್ಲರೂ ಬೆತ್ತಲೆ !

 1. ವಿಶ್ವರಾದ್ಯ ಸಂತೆಪೆಟೆ ಮಾರ್ಗದಲ್ಲಿ sex stories ಬರೆಯಿರಿ… ನಮಗೆ ಅಭ್ಯಾಂತರ ಇಲ್ಲಾ…

  ಯಾರ web ಹೆಸರಿನಲ್ಲಿ ಎನು ಬರಿಯುತ್ತಿದ್ದಿರಿ ಅನ್ನು ಪರಿಜ್ಞಾನ ಇಲ್ಲವೆ ನಿಮಗೆ ???

  ಪರಸ್ತ್ರೀಯ ಬಗ್ಗೆ ವಚನ ಸಾಹಿತ್ಯದಲ್ಲಿ ಎನ ಹೆಳಿದ್ದಾರೆ ಅನ್ನುವುದು ಮುಖ್ಯವಾಗುತ್ತೆ, ನಿನ್ನ ವಯಕ್ತಿಕ ಅಭಿಪ್ರಾಯ ಇಲ್ಲಿ ಬೆಕಾಗಿಲ್ಲಾ..

  *ಯಾವಡೊಣ್ಣೆನಾಯಕನ ಅಪ್ಪಣೆ* ಇಲ್ಲಾ ಅಂತ ತಿಳಿದು, ಪವಿತ್ರವಾದ ಗುರು ಬಸವಣ್ಣನವರ ಹೆಸರಿನ web ನಲ್ಲಿ ನಿನ್ನ ವಯಕ್ತಿಕ ಅನಿಸಿಕೆ ಬರೆಯುವುದು ಎಷ್ಟು ಸರಿ ???

  *ವಿಡಿಯೊನೊಡಿ ಅವರ ಮನೆಯವರಿ ಎಷ್ಟು ದುಃಖ* ಅಂತ ನಿನು ಯೊಚನೆ ಮಾಡುತ್ತಿದ್ದಿಯಾ.. ಈ ಯೊಗದಲ್ಲಿ ಎಕಪತಿವೃತರು ಎಕಪತ್ನಿವೃತರು ಇದ್ದಾರೆ, ನಿನ್ನ ಈ ಲೆಖನ ನೊಡಿ ಅವರಿಗೆ ಎನನಿಸಬಾರದು ಹಾ ????

  ಮಡಿವಾಳ ಮಾಚಿತಂದೆಯ ವಚನ ನೆನಪಿಗೆ ಬರುತ್ತದೆ

  *ಪರಸ್ತ್ರೀಯರ ನೋಡುವ ಕಣ್ಣು ಲಿಂಗವ ನೋಡಿದ ಅವರಿಗೆ ಲಿಂಗವಿಲ್ಲ. ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ* *ಪರಸ್ತ್ರೀಯರ ಅಧರಪಾನವ ಕೊಂಡಡೆ, ಪ್ರಸಾದಕ್ಕೆ ದೂರ*. *ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ, ತಾ ಮಾಡುವ ಪೂಜೆ ನಿಷ್ಫಲ*. *ಇದರಿದಡೆ ವ್ರತ*.
  *ಅಲ್ಲದಿರ್ದಡೆ, ಸುರೆಯ ಒಳಗೆ ತುಂಬಿ, ಹೊರಗೆ ಬೂದಿಯ ಪೂಸಿದಂತಾಯಿತ್ತು, ಕಲಿದೇವಾ*
  – ಮಡಿವಾಳ ಮಾಚಿತಂದೆ

  ಬಸವಣ್ಣನವರು ಎನ ಹೆಳಿದ್ದಾರೆ ನಿನು ಎನು ಬರೆಯುತ್ತಿದ್ದಿ.. ಅಲ್ಲ ಒಬ್ಬ ಸಾಮಾನ್ಯ ವ್ಯಕ್ಕಿ ಇಂತಹ ವಿಚಾರಗಳ ಬಗೆ ಮಾತನಾಡುವಾಗ ಅಥವಾ ಬರೆಯುವಾಗ ಎಚ್ಚರದಿಂದ ಇರುತ್ತಾನೆ, ಅಂಥದುದರಲ್ಲಿ ನಿನ್ನನು follow ಮಾಡೊಜನರಿರುವಾಗ, ಒಂದೊಂದು ಮಾತು ಒಂದೊಂದು ಶಬ್ದಬರೆಯುವ ಮೊದಲು ಮೈಯಲ್ಲಾ ಕಣ್ಣಿರಬೆಕು. ಈ ಲೆಖನ ಬತ್ತಲೆಯಾಗಿ ಬರೆದಂಗೆ ಕಾಣುತ್ತೆ..

  *ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ.*
  *ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ.*
  *ಒಂದಾಸೆಗೆ ಸಾಸಿರ ವರುಷ ನರಕದಲದ್ದುವ ಲಿಂಗದೇವ*.
  – ಗುರು ಬಸವಣ್ಣನವರು

  ~ಮನುಷ್ಯ ಪ್ರಾಣಿಗಲಿಗೆ ಹೆಚ್ಚು ವ್ಯತ್ಯಾಸವಿಲ್ಲ ಆದರೆ ಕೆಲವುವಿಷಯಗಳನ್ನು ಮನುಷ್ಯ ಗೌಪ್ಯವಾಗಿಡಬಲ್ಲಾ …..~ ಅಂತ ಬರಿದಿದ್ದಿರಲ್ಲಾ.. ಪ್ರತಿಯೊಬ್ಬರಿಗು ಅವರ ಮನಸ್ಸೆ ಕೈಗನ್ನಡಿಯಾಗಿದೆ, ಇಡಿಸಮಾಜದಮುಂದೆ ಗೌಪ್ಯವಾಗಿಟ್ಟರು ಅವನ ವಯಕ್ತಿಕ ಮನಸಿನ ಮುಂದೆ ಅದು ತಪ್ಪೆಯಾಗಿರುತ್ತದೆ. ಅವನ ಹತ್ತಿರ ಎಷ್ಟೆದುಡ್ಡುಇರಲಿ ಅಥವಾ ಜ್ಞಾನ ಇರಲಿ ಮನಸ್ಸಿಗೆಬಂದಹಾಗೆ ಮಿರಿ ನಡೆದರೆ ನಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಾರೆ ಎಂದು ಅಕ್ಕಾಮಾಹಾದೆವಿ ಈ ಕೆಳಗಿನ ವಚನದಲ್ಲಿಹೆಳಿದ್ದಾರೆ.. Quantity ಕಿಂತ quality ಮುಖ್ಯವಾಗುತ್ತೆ, ಹಚ್ಚಿನ ಜನ ಇಂತಹ ತಪ್ಪುಗಳನ್ನುಮಾಡುತದ್ದರು ಅವರ ಮದ್ಯದಲ್ಲಿ ಬಸವಮಾರ್ಗದಲ್ಲಿ ನಡೆಯವವರನ್ನು ಕಡೆಗಳಿಸಲಾಗುವುದಿಲ್ಲಾ ಹಾಗೆ ತಪ್ಪುಮಾಡಿದ್ದವರನ್ನು ಸಮರ್ಥಿಸುಕೊಳ್ಲಲಾಗುವುದಿಲ್ಲಾ.

  *ಅರಿವು ಸಾಧ್ಯವಾಯಿತ್ತೆಂದು, ಗುರುಲಿಂಗಜಂಗಮವ ಬಿಡಬಹುದೆ ?* *ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ ?*
  *’ಯತ್ರ ಜೀವಃ ತತ್ರ ಶಿವಃ’ ಎಂಬ ಅಭಿನ್ನ ಜ್ಞಾನವಾಯಿತ್ತೆಂದು ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ ?* *ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು’ ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು.*
  *ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ ಮೀರಿನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು ?*
  – ಅಕ್ಕಮಹಾದೇವಿ

  ವಿಶ್ವನಾಥ ಕೋರೆ✍🏼

  1. ೧. ಇಂಥ ಲೇಖನಗಳು ಬಸವ ಮಾರ್ಗದಂತಹ ಧಾರ್ಮಿಕ ಪತ್ರಿಕೆಗಳಿಗೆ ಸರಿ ಹೊಂದುವುದಿಲ್ಲ ಮತ್ತು ಶೋಭೆ ತರುವಂಥದಲ್ಲ. ಸಾಕಷ್ಟು ಕ್ರೈಂ ಸುದ್ದಿ ಪತ್ರಿಕೆಗಳಿವೆ ಅಲ್ಲಿ ಬರೆಯಬಹುದು. ಧಾರ್ಮಿಕ ಪತ್ರಿಕೆ ನಡೆಸುಔರು ಅದರಲ್ಲೂ ಗುರು ಬಸವಣ್ಣನವರ ತತ್ವಗಳನ್ನು ಹೇಳುವ ಪತ್ರಿಕಗಳು ಇಂತಹ ವಿಚಾರ ಬರೆಯಬಾರದು.
   ೨. ಇಂಥ ಲೇಖನದಲ್ಲಿ ಜಗನ್ಮಾತೆ ಅಕ್ಜಮಹಾದೇವಿಯವರ ವಚನ “ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು” ಉದಾಹರಣೆಗೆ ಬಳಸಿಕೊಂಡಿರುವುದು ಲೇಖಕರಿಗೆ ವಚನಗಳನ್ನು ಎಲ್ಲಿ ಬಳಸಬೇಕು ಎನ್ನುವ ಸಾಮನ್ಯ ಜ್ಞಾನವೂ ಇಲ್ಲ ಎಂದು ಬಿಂಬಿತವಾಗುತ್ತದೆ.

 2. ಸನ್ಮಾನ್ಯ ವಿಶ್ವನಾಥ ಕೋರೆಯವರೆ,
  ಪರಸ್ತ್ರೀಯನ್ನು ಮಹಾದೇವಿ ಎಂಬೆ ಮಾತು ನನಗೂ ಗೊತ್ತು. ತಾವು ಮತ್ತೊಮ್ಮೆ ಮಗದೊಮ್ಮೆ ಲೇಖನ ಸರಿಯಾಗಿ ಓದಿರಿ. ನನ್ನ ಮುಖ್ಯವಾದ ಉದ್ದೇಶವೆಂದರೆ ಯಾರೋ ಯಾರೋ ಒಪ್ಪಿಕೊಂಡು ರಾಸಲೀಲೆ ನಡೆಸಿದರೆ ಅದರ ಸತ್ಯಾಸತ್ಯತೆ ಗೊತ್ತಿಲ್ಲದೆ ನಾಲ್ಕೆಂಟು ದೃಶ್ಯ ಮಾಧ್ಯಮ ಬಾಯಿ ಬಡಕೋಳ್ಳುವುದಕ್ಕಿಂತ ಮುಂಚೆ ಅದನ್ನು ಪರಿಶೀಲನೆಗೆ ಒಳ ಪಡಿಸಬೇಕು ಎಂದಿದೆಯೆ ಹೊರತು, ಬೇರೆ ಇನ್ನೇನು ಇಲ್ಲ.

  ಕುರುಡಿಯ ಹಾದರಕ್ಕೆ ಊರೆಲ್ಲ ನಿದ್ದೆಗೇಡು ಎಂಬಂತೆ ಆಗಬಾರದು. ಮೇಲಾಗಿ ಅವರಿಬ್ಬರ ಒಪ್ಪಿಗೆಗೆ ನಾವೆಲ್ಲರೂ ಏಕೆ ತಲೆ ಕೆಡಿಸಿಕೊಳ್ಳಬೇಕು. ಅವರು ಮಾಡುವ ಕೆಟ್ಟ ಕೆಲಸದಿಂದ ಸಾಮಾಜಿಕ, ಕೌಟುಂಬಿಕ ತೊಂದರೆ ಆಗದಿದ್ದರೆ ಸಾಕು.

  ಹಿಂದೆ ಎಷ್ಟೋ ಜನರನ್ನು ಯಾರು ಮತ್ತಾರೊಂದಿಗೆ ಕಲ್ಪಿಸಿ ಬರಹ ಬರೆಯಲಾಗಿದೆ. ದೃಶ್ಯ ಮಾಧ್ಯಮದಲ್ಲಿ ಬಿತ್ತರಿಸಲಾಗಿದೆ. ಇದರಿಂದ ಸಾಮಾಜಿಕ ಅಲ್ಲೋಲ ಕಲ್ಲೋಲ ಉಂಟಾಗಿ, ಅವರ ಚಾರಿತ್ರ್ಯ ಹನನವಾಗಿದೆಯೆ ಹೊರತು ಇನ್ನೇನಾದರೂ ಆಗಿದೆಯೆ ?

  ತಪ್ಪಿತಸ್ಥನ ಕುಟುಂಬದ ಕಷ್ಟ ನೋವುಗಳನ್ನು ನಾವು ಪರಿಗಣಿಸಬೇಕು. ಅವರ ಸುಖ ಎನ್ನಸುಖ, ಅವರ ದುಃಖವೆನ್ನ ದುಃಖ ಎಂದರಿಯಬೇಕು.

  ನಿಮ್ಮ ಪ್ರತಿಕ್ರಿಯೆಗೆ ಶರಣುಗಳು.

  1. ಚರ್ಚಿಸುವ ಅಗತ್ಯವಿಲ್ಲಾ….
   ಅನುಭವ ಮಂಟಪದಲ್ಲಿ ಚರ್ಚೆಯಾಗಿ.. ವಚನಗಳಲ್ಲಿ ಉಲ್ಲೇಖವಾಗಿ, ಇಂಥಹ ವಚನಗಳನ್ನಿ ಚನ್ನಬಸವಣ್ಣನವರಿಂದ ಪರಿಷಿಲನಗೊಂಡು, ಸಮಾಜಕ್ಕೆ ಮಾರ್ಗದಷಕವಾಗಿವೆ.. ಒಂದುವಚನವನ್ನು ನಾವು ಜಿವನದಲ್ಲಿ ಅಳವಡಿಸಿಕೊಂಡರು ನಮ್ಮ ಜಿವನ ಸಾರ್ಥಕ..

   ಇನ್ನು ನಿಮ್ಮ ಲೇಖನ ಶಿರಶಿಕೆ, ಮಾದ್ಯಮಗಳ ಜವಾಬ್ದಾರಿ ಇದ್ದರೆ ಅದು ಮಾತು ಬೆರೆಯಾಗುತಿತ್ತು, ಅದರಲ್ಲು. ನಿವು ಹೆಳುತ್ತಿರುವ ಹಾಗೆ ಮಿಡಿಯಾದಲ್ಲಿ ನಗ್ನ ಚಿತ್ರಗಳನ್ನು Bloor ಮಾಡಿರುತ್ತಾರೆ, Bloor ಮಾಡಿದಮೆಲೆಯು ತನ್ನದೆಯಾದ ನಿಭಂದನೆ ವಳಗಡೆಎ ಅವು ತಮ್ಮ ಕೆಲಸಗಳನ್ನು ಮಾಡುತ್ತಾಇದೆ,
   ನಿಮ್ಮ ಲೆಖನ ಎಲ್ಲಾ ಕಟ್ಟು ಪಾಡುಗಳನ್ನು ಮಿರಿ, ಯಾವುದೆ Censor ಇಲ್ಲದೆ publish ಆಗಿದೆ.. ಇದರ ಉದ್ದೆಷ *ಬಸವಮಾರ್ಗ ಬಿಟ್ಟು ಹೊಗಿದೆ* ಅನ್ನೊದರಲ್ಲಿ ಎಳ್ಳಸ್ಟು ಸಂಶಯವಿಲ್ಲ, ಹಾಗಾಗಿ ಈ web n ಹೆಸರು ಬಸವಮಾರ್ಗ ತೆಗದು *Crime stories* ಇಡುವುದು ಸುಕ್ತವಾಗುತ್ತೆ.. ಇಲ್ಲಾವಾದರೆ *ಲೆಖನ ತೆಗೆದು ಬಿಡಿ* ಈ ಲೆಖನದಲ್ಲಿ ಯಾವುದೆ ಬಸವ ಮಾರ್ಗ ಒಳಗೊಂಡಿಲ್ಲಾ.

   ತಮ್ಮನ್ನು ತಾವು ಮಾರಿಕೊಂಡು ಒಂದು ರಾಜಕಾರ್ಣಕ್ಕೆ ಮೆಚ್ಚಿಸುವ ಲೆಖನ ನಮ್ಮದಾಗಬಾರದು..
   ಇಮಥಹ ಲೆಖನಗಳು ಇದ್ದರೆ ಅಥವಾ ಮುಂದುವರೆದರೆ, *ಬಸವ ಮಾರ್ಗದಲ್ಲಿ ನಡೆಯವ ಶರಣರು ಇದನ್ನು ಉದುವುದನ್ನು ನಿಲ್ಲಿಸಿಬಿಡುತ್ತಾರೆ*.. ಮುಂದೆ ಒಂದು ಅದ್ಬುತ ಲೆಖನ ಬರೆದರು ಅದು ಬಸವಮಾರ್ಗದಲ್ಲಿ ನಡೆಯುವವರಿಗೆ ತಲುಪುವುದಿಲ್ಲಾ.. ಇದು ಬಸವ ಮಾರ್ಗ web ನ ಉದ್ದೇಶವೆ..

   *ನಿಮ್ಮ ಉತ್ತರ ನನಗೆ ಬೆಕಾಗಿಲ್ಲಾ* ನಿಮ್ಮ ಲೆಖನ ಬಸವ ಮಾರ್ಗದ ಚೌಕಟ್ಟಿನಲಗಲಿ ಇಡಿ.

   *ನಿಮ್ಮ ಲೆಖನ ಬಸವಮಾರ್ಗದ ಚೌಕಟ್ಟು ಧಾಟಿದರೆ ಇದಕ್ಕೆ ಉತ್ತರ ಕೊಡಬಹುದು.*

Leave a Reply

Your email address will not be published. Required fields are marked *

error: Content is protected !!