ನಾಡಿನ ಬೌದ್ಧಿಕ ಚೇತನ: ಡಾ.ಎಂ.ಎಂ.ಕಲಬುರ್ಗಿ

(ಹಗಲಿನಲ್ಲಿಯೆ ಸಂಜೆಯಾಯಿತು ಕೃತಿಯಿಂದ)

ನಾಡಿನ ಬೌದ್ಧಿಕ ಚೇತನ: ಡಾ.ಎಂ.ಎಂ.ಕಲಬುರ್ಗಿ

ನಾಡಿನ ಹೆಸರಾಂತ ಸಂಶೋಧಕರು, ಬಸವ ಧರ್ಮ ಮತ್ತು ವಚನಶಾಸ್ತ್ರದ ಅಪಾರ ಸಂಶೋಧನೆ ಮೂಲಕ ವಿರಕ್ತ ಲಿಂಗಾಯತ ಮಠಗಳ ಮಹಾ ಗುರುಗಳು ಎನಿಸಿಕೊಂಡ ಡಾ.ಎಂ.ಎಂ.ಕಲಬುರ್ಗಿ ಅವರು ಪ್ರಗತಿಪರ ಮಠಗಳ ಪಾಲಿನ ಬಹುದೊಡ್ಡ ಬೌದ್ಧಿಕ ಚೇತನ ಸ್ವರೂಪಿಗಳಾಗಿದ್ದರು.

ರಾಜ್ಯದ ಅತ್ಯಂತ ಹಿರಿಯ ಸಂಶೋಧಕರಾದ ಕಲಬುರ್ಗಿ ಅವರಿಗೆ ಕೆಲಸ ಮಾಡಲು ವಿಶ್ವವಿದ್ಯಾಲಯ ಕಾರ್ಯವ್ಯಾಪ್ತಿ ಸಾಲುತ್ತಿರಲಿಲ್ಲ, ಅಷ್ಟೊಂದು ವಿಶಾಲ ಯೋಜನೆಗಳನ್ನು ತಲೆಯಲ್ಲಿ ತುಂಬಿ ಕೊಂಡಿದ್ದರು.

ಲಿಂಗಾಯತ ಮಠಗಳು ತಮ್ಮ ಮಡಿವಂತಿಕೆಯನ್ನು ಬಿಟ್ಟು, ರಾಮಕೃಷ್ಣ ಆಶ್ರಮ ಮತ್ತು ಕ್ರಿಶ್ಚಿಯನ್ ಧರ್ಮ ಗುರುಗಳ ಮಾದರಿಯಲ್ಲಿ ಜನ ಸಾಮಾನ್ಯರಿಗೆ ತಲುಪಲಿ ಎಂಬ ಹಂಬಲವಿತ್ತು.ಆದರೆ ಬಹುಪಾಲು ಮಠಾಧೀಶರು ಪೂಜೆ,ಮಡಿ,ಪ್ರಸಾದ,ಅನುಷ್ಠಾನಗಳ ನೆಪದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡು ಅದರಲ್ಲಿ ಕಳೆದು ಹೋಗಿದ್ದರು.ವರ್ತಮಾನದ ದಿನಗಳಿಗೆ ಅಗತ್ಯವಿರುವ ಸರಳತೆ,ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯನ್ನು ಆಚರಿಸುತ್ತಿರಲಿಲ್ಲ.

ಗದುಗಿನ ದೊಡ್ಡ ಐತಿಹಾಸಿಕ ಪರಂಪರೆ ಹೊಂದಿದ ತೋಂಟದಾರ್ಯ ಮಠಕ್ಕೆ ತಮ್ಮ ವಿದ್ಯಾರ್ಥಿಯೊಬ್ಬರು ಪೀಠಕ್ಕೆ ಬಂದಾಗ ಸಂತೋಷಪಟ್ಟರು.
ಮಾರ್ಗದರ್ಶನ ಕೋರಿ ಅಜ್ಜಾ ಅವರು ಅವರನ್ನು ಭೇಟಿ ಆದಾಗ ಅನೇಕ ಸಲಹೆಗಳನ್ನು ನೀಡಿದರು,ಆ ಎಲ್ಲ ಆಸೆಗಳನ್ನು ತಾವು ಈಡೇರಿಸುವ ಭರವಸೆಯನ್ನು ಕೊಟ್ಟ ಮೊದಲ ಮಠಾಧೀಶರೆನಿಸಿಕೊಂಡರು.

ನಂತರ ಶ್ರೀಮಠದಲ್ಲಿ ಅಧ್ಯಯನ ಪ್ರಸಾರಾಂಗ ಸ್ಥಾಪಿಸಿ ತನ್ಮೂಲಕ ಆಗಬೇಕಾದ ಜವಾಬ್ದಾರಿಗಳ ನೀಲ ನಕ್ಷೆಯನ್ನು ತಯಾರಿಸಿ ಕೊಟ್ಟರು.
ಆಗ ಆರಂಭವಾದ ವೀರಶೈವ ಅಧ್ಯಯನ ಸಂಸ್ಥೆ ಸಾವಿರಾರು ಪುಸ್ತಕಗಳ ಪ್ರಕಟಣೆ ಪೂರೈಸಿ ಅಕ್ಯಾಡೆಮಿಕ್ ವಲಯದ ಗಮನ ಸೆಳೆದು ನಿರ್ಮಿಸಿದ ಇತಿಹಾಸ ವೇದ್ಯ ಸಂಗತಿಯಾಗಿದೆ.

ಡಾ.ಕಲಬುರ್ಗಿ ಅವರ ಸಂಶೋಧನೆ ಮೇಲೆ ಪೂಜ್ಯರಿಗೆ ಅಪಾರ ವಿಶ್ವಾಸ,ಲಿಂಗಾಯತ ಧರ್ಮ, ವಚನ ಶಾಸ್ತ್ರದ ಕುರಿತು ಕಲಬುರ್ಗಿ ಅವರಿಗಿರುವ ಜ್ಞಾನವನ್ನು ಅರ್ಥ ಮಾಡಿಕೊಂಡರು. ತಾವು ಅಧ್ಯಯನ ಮಾಡಿದ ವಿಷಯಗಳನ್ನು ಪ್ರತಿಪಾದನೆ ಮಾಡಿ ನಿರೂಪಿಸಲು ತೋಂಟದಾರ್ಯ ಮಠವನ್ನು ಕಾರ್ಯಕ್ಷೇತ್ರವನ್ನಾಗಿಸಿ ಕೊಂಡರು.

ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯ ಮಾಡದಷ್ಟು ಕೆಲಸಗಳನ್ನು ಮಠದ ಅಧ್ಯಯನ ಸಂಸ್ಥೆ ಯಶಸ್ವಿಯಾಗಿ ಮಾಡಿತು.

ಅಧ್ಯಯನ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಪ್ರಕಟಿಸಿದ ಗ್ರಂಥಗಳು ಮತ್ತು ಅವು ಸಮಾಜದ ಮೇಲೆ ಬೀರಿದ ಪ್ರಭಾವವನ್ನು ನಾವೆಲ್ಲ ನೋಡಿದ್ದೇವೆ.

ಗ್ರಂಥ ಪ್ರಕಟಣೆಯನ್ನು ಹೊರತು ಪಡಿಸಿ, ಲಿಂಗಾಯತ ಧರ್ಮ ಮತ್ತು ಸಾಮಾಜಿಕ ಬದಲಾವಣೆಗೆ ಮಠದ ಒಲವು ನಿಲುವುಗಳು ಏನಾಗಿರಬೇಕು ಎಂಬುದನ್ನು ಕಲಬುರ್ಗಿ ಅವರೇ ನಿರ್ದೇಶನ ಮಾಡಿದ ಕಾರಣದಿಂದ ಪೂಜ್ಯರ ವಿಚಾರಧಾರೆಗೆ ಜಾಗತಿಕ ಮನ್ನಣೆ ಲಭಿಸಿತು.

ಅದನ್ನು ಪೂಜ್ಯರು ಬಹಿರಂಗವಾಗಿ ಪ್ರತಿಪಾದನೆ ಮಾಡುತ್ತಿದ್ದರು. ಯಾವುದೇ ಪದವಿ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ಲಿಪ್ತ ಭಾವದಿಂದ ಸುಮಾರು ನಾಲ್ಕು ದಶಕಗಳವರೆಗೆ ಕಲಬುರ್ಗಿ ಅವರು ಪೂಜ್ಯರ ಮತ್ತು ಮಠದ ಏಳ್ಗೆಗಾಗಿ ದುಡಿದರು.

ವಿಶ್ವವಿದ್ಯಾಲಯದಲ್ಲಿ ಕಲಿಯುವಾಗ ಪೂಜ್ಯರಿಗೆ ಕಲಬುರ್ಗಿ ಅವರು ಗುರುಗಳಾದರೆ, ಸಮಾಜದ ಅಭಿವೃದ್ಧಿಗೆ ದುಡಿಯುವಾಗ ಪೂಜ್ಯರು ಕಲಬುರ್ಗಿ ಅವರಿಗೆ ಗುರುಗಳಾದರು.ಗುರು-ಶಿಷ್ಯ ಪರಂಪರೆಗೆ ಹೊಸ ಆಯಾಮವನ್ನು ಇಬ್ಬರೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಕೊನೆಯವರೆಗೂ ಉಳಿಸಿಕೊಂಡು ಹೋದರು.

ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡ ಕೆಲವು ಕಾಣದ ಕೈಗಳು ಅಲ್ಲ,ಎದುರೇ ಕಾಣುವ ಕೈಗಳು ಎಷ್ಟೋ ಭಿನ್ನಾಭಿಪ್ರಾಯ ತರಲು ಪ್ರಯತ್ನಿಸಿದರು ಅದಕ್ಕೆ ಇಬ್ಬರೂ ಜಗ್ಗಲಿಲ್ಲ,ಬಗ್ಗಲಿಲ್ಲ.ಮಠದ ಭೌತಿಕ ಸಂಪತ್ತು ಬೆಳೆದರೂ ಬೌದ್ಧಿಕ ಸಂಪತ್ತು ಕುಸಿಯದ ಹಾಗೆ ಕಲಬುರ್ಗಿ ಅವರು ಕಾವಲಾಗಿ ನಿಂತರು.

ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ನೂರಾರು ಶಿಷ್ಯರು ಮಠಾಧೀಶರಾಗಿದ್ದರು ಆದರೆ ಅವರ‌್ಯಾರು ತೋಂಟದಾರ್ಯ ಮಠದ ಅಜ್ಜಾ ಅವರು ಏರಿದ ಎತ್ತರಕ್ಕೆ ಏರಲಾಗಲಿಲ್ಲ.ಮಠದ ಸಂಪ್ರದಾಯ ಮುರಿದು ಕಟ್ಟುವ ಧೈರ್ಯ ಮಾಡದ ಕಾರಣ ನಿಂತ ನೀರಾದರು.

ಆದರೆ ತೋಂಟದಾರ್ಯ ಶ್ರೀಗಳು ಗ್ರಂಥ ಪ್ರಕಟಣೆ, ಸಾರ್ವಜನಿಕ ಜನ ಜಾಗೃತಿ, ಜನಪರ ಹೋರಾಟಗಳು ಮತ್ತು ನಾಡ ಕಟ್ಟುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಇಡೀ ರಾಜ್ಯ ಸುತ್ತಿ ಹತ್ತೇ ವರ್ಷದಲ್ಲಿ ತಮ್ಮತನ ಸಾಬೀತು ಪಡಿಸಿಕೊಳ್ಳಲು ಕಲಬುರ್ಗಿ ಅವರ ನಿರಂತರ ಮಾರ್ಗದರ್ಶನವೇ ಕಾರಣವಾಯಿತು.

ಲಿಂಗಾಯತ ಧರ್ಮದ ಕುರಿತ ಅವರ ಸಂಶೋಧನಾ ವಿಷಯಗಳನ್ನು ಮೊದಲು ಬಹಿರಂಗವಾಗಿ ಪ್ರಚುರಪಡಿಸಲು ಅಜ್ಜಾ ಅವರು ಸದಾ ಸಿದ್ಧರಾಗಿರುತ್ತಿದ್ದರು.

ಮಠಾಧೀಶರ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ನಿಲುವು ಮತ್ತು ಸಾಮಾಜಿಕ ಬದ್ಧತೆಯ ಆಯಾಮಗಳ ಕುರಿತು ಪೂಜ್ಯರಿಗೆ ಮಾರ್ಗದರ್ಶನ ನೀಡಿ ಅವೆಲ್ಲವೂ ಜಾರಿಯಾಗುವಂತೆ ಎಚ್ಚರ ವಹಿಸುತ್ತಿದ್ದರು.

ಗೋಕಾಕ ಚಳುವಳಿಯಲ್ಲಿ ಮಠಾಧೀಶರುಗಳು ಭಾಗವಹಿಸುವ ಮನಸು ಮಾಡಿರಲಿಲ್ಲ.
ಮಠಾಧೀಶರು ಸರಕಾರದ ವಿರುದ್ಧ ದನಿ ಎತ್ತುವ ಕುರಿತು ಅನೇಕ ಗೊಂದಲಗಳಿದ್ದವು ಆದರೆ ನೆಲ,ಜಲ,ಭಾಷೆ ಮತ್ತು ಕನ್ನಡ ಸಂಸ್ಕೃತಿ ಉಳಿವಿಗಾಗಿ ಮಠಾಧೀಶರು ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿ ಕೊಟ್ಟರು.

ಪ್ರತಿ ವರ್ಷದ ಜಾತ್ರೆಯ ಸಂದರ್ಭದಲ್ಲಿ ಯಾವ ಯಾವ ಪುಸ್ತಕಗಳು ಪ್ರಕಟವಾಗಬೇಕು ಎಂಬುದನ್ನು ಮೊದಲು ನಿರ್ಧರಿಸಿ ಅದಕ್ಕೆ ಸಂಬಂಧಿಸಿದ ಸಾಹಿತಿಗಳ ಮೂಲಕ ಪುಸ್ತಕ ಬರೆಸಿ, ಅದರ ಕರಡನ್ನು ಕೂಲಂಕಷವಾಗಿ ತಿದ್ದಿ ತಿಡಿ ಮುದ್ರಣಕ್ಕೆ ಕಳಿಸುತ್ತಿದ್ದರು. ಪುಸ್ತಕ ಬಿಡುಗಡೆ ಸ್ವರೂಪ ಮತ್ತು ಭಾಗವಹಿಸುವ ಅತಿಥಿಗಳು, ಕಾರ್ಯಕ್ರಮ ನಡೆಸುವ ವಿಧಾನ ಮತ್ತು ನಿರೂಪಣೆ ಕೂಡ ಹೇಗಿರಬೇಕು ಎಂಬ ವಿವರಗಳನ್ನು ಪಟ್ಟಿ ಮಾಡಿ ಕಳಿಸುತ್ತಿದ್ದರು.

ಅನಗತ್ಯ ವೇದಿಕೆ ಮೇಲೆ ತಾವೆಂದೂ ನೇರವಾಗಿ ಕಾಣಿಸಿಕೊಳ್ಳದೇ ಎಲ್ಲವನ್ನೂ ಸರಿಯಾಗಿ ನಿಯಂತ್ರಣ ಮಾಡುತ್ತಿದ್ದರು. ಪ್ರತಿ ಜಾತ್ರೆಯ ಮೂಲಕ ಹೊಸ ಪುಸ್ತಕ ಸಂಸ್ಕೃತಿ ಹುಟ್ಟು ಹಾಕಿ ಜಾತ್ರೆಯನ್ನು ಸಾಂಸ್ಕೃತಿಕ ಯಾತ್ರೆಯನ್ನಾಗಿ ಪರಿವರ್ತನೆ ಮಾಡಿದ ಶ್ರೇಯಸ್ಸು ಕಲಬುರ್ಗಿ ಅವರಿಗೆ ಸಲ್ಲುತ್ತದೆ.

ಮಠದ ಮೂಲಕ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆ ಆರಂಭಿಸುವ ಸಲಹೆ ಕೊಟ್ಟರು. ಮುಖ್ಯವಾಗಿ ಜನಪರ ಆಲೋಚನೆ ಮತ್ತು ಇತಿಹಾಸ ನಿರ್ಮಿಸುವ ಪುಸ್ತಕ ಪ್ರಕಟಣೆ ಮೂಲಕ ತೋಂಟದಾರ್ಯ ಮಠ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದರು.

ಅಗತ್ಯ ಬಿದ್ದಾಗ ನೇರವಾಗಿ ಮಠಕ್ಕೆ ಬಂದು ಪೂಜ್ಯರೊಂದಿಗೆ ಚರ್ಚೆ ಮಾಡಿ ಆಗಬೇಕಾದ ಕೆಲಸಗಳ ವಿವರಣೆ ನೀಡುತ್ತಿದ್ದರು.ಪೂಜ್ಯರು ಧಾರವಾಡಕ್ಕೆ ಹೋದಾಗ ಕಲಬುರ್ಗಿ ಸರ್ ಮನಗೆ ಹೋಗಿ ಮಹತ್ವದ ಸಂಗತಿಗಳ ಕುರಿತು ಮಾತನಾಡಿ ಬರುತ್ತಿದ್ದರು.ಇಲ್ಲಿಯವರೆಗೆ ಇಂತಹ ಗುರು-ಶಿಷ್ಯ ಸಂಬಂಧವನ್ನು ಈ ನಾಡು ಕಂಡಿಲ್ಲ,ಮುಂದೆ ಕಾಣುವುದು ಇಲ್ಲ.

ಗುರು ಶಿಷ್ಯರು ಇಬ್ಬರಲ್ಲಿ ಹಲವಾರು ಸಾಮ್ಯತೆಗಳಿದ್ದವು.
ಸರಳತೆ,ನೇರ ನಡೆ,ನೇರ ನುಡಿ, ಸಮಾಜಮುಖಿ ಚಿಂತನೆ, ಸಾರ್ವಜನಿಕ ಸಭ್ಯತೆ, ಪ್ರಾಮಾಣಿಕತೆ,ಬಸವ ಪ್ರಜ್ಞೆ, ವಚನಗಳ ವ್ಯಸನ,ಭಾವನಾತ್ಮಕ ತುಡಿತ, ನಿಷ್ಠುರ ವೈಚಾರಿಕತೆ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಮಠದ ಆರ್ಥಿಕ ವಿಚಾರದಲ್ಲಿ ಕಲಬುರ್ಗಿ ಅವರು ಭಾಗವಹಿಸುತ್ತಿರಲಿಲ್ಲ.ಆದರೆ ಆಡಳಿತ ನಿರ್ವಹಣೆಯಲ್ಲಿ ಯಾರಾದರೂ ಹಾದಿ ತಪ್ಪಿಸಿದರೆ ಸೂಕ್ಷ್ಮವಾಗಿ ಎಚ್ಚರಿಸುತ್ತಿದ್ದರು.
ಯಾವುದೇ ಕಾರಣದಿಂದ ಪೂಜ್ಯರಿಂದ ಅಪಚಾರವಾಗಬಾರದೆಂಬ ಮಾತೃ ಕಾಳಜಿ ಅವರಿಗಿತ್ತು.

ಒಮ್ಮೆ ಡಾ.ಕಲಬುರ್ಗಿ ಅವರ ಹೆಸರು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಸ್ಥಾನಕ್ಕೆ ಕೇಳಿ ಬಂತು ಆದರೆ ಸರಕಾರ ಇತರ ಕೆಲ ಹೆಸರುಗಳ ಪರಿಶೀಲನೆಯಲ್ಲಿ ಇತ್ತು.
ಎಂ.ಪಿ.ಪ್ರಕಾಶ ಮೂಲಕ ಡಾ.ಕಲಬುರ್ಗಿ ಅವರನ್ನು ಕುಲಪತಿಗಳಾಗಿ ನೇಮಿಸಬೇಕೆಂದು ಸರಕಾರದ ಮೇಲೆ ಒತ್ತಡ ತಂದರು.ಇತರ ಯಾವುದೇ ವಿಷಯ ಇದ್ದಾಗ ನೇರವಾಗಿ ಸರ್ಕಾರದ ಮೇಲೆ ಒತ್ತಡ ತರುವ ಸ್ವಭಾವ ಅವರದಾಗಿರಲಿಲ್ಲ. ಆದ್ದರಿಂದ ಈ ವಿಷಯ ಕಲಬುರ್ಗಿ ಅವರ ಗಮನಕ್ಕೆ ಬಾರದಂತೆ ಎಚ್ಚರವಹಿಸಿದರು.ಕಲಬುರ್ಗಿ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂಬ ಮಹದಾಸೆಯನ್ನು ಪೂಜ್ಯರು ಹೊಂದಿದ್ದರು.

ಆದರೆ ಡಾ.ಕಲಬುರ್ಗಿ ಇದ್ದ ಕ್ಷೇತ್ರ ತುಂಬಾ ‘ಅನ್ ಪಾಪ್ಯುಲರ್’, ಕ್ರಿಯಾಶೀಲ ಬರಹಗಾರರಿಗೆ ಇದ್ದ ಜನಪ್ರಿಯತೆ ಸಂಶೋಧಕರಿಗೆ ಇರುವುದಿಲ್ಲ ಎಂಬುದು ನೇಮಕಾತಿಗೆ ತೊಡಕಾಯಿತು.

ನಾಡಿನ ಹೆಸರಾಂತ ಬರಹಗಾರರಾದ ಲಂಕೇಶ್, ಚಂದ್ರಶೇಖರ ಕಂಬಾರ,ಚಂದ್ರಶೇಖರ ಪಾಟೀಲ,ಗಿರಡ್ಡಿ ಗೋವಿಂದರಾಜ ಹೀಗೆ ಅನೇಕ ಕ್ರಿಯಾಶೀಲ ಸಾಹಿತಿಗಳಿಗಿದ್ದ ಪ್ರಚಾರ ಕಲಬುರ್ಗಿ ಅವರಿಗೆ ಲಭಿಸದಿರಲು ಅವರ ಆಯ್ದುಕೊಂಡ ಸಂಶೋಧನಾ ಕ್ಷೇತ್ರವೇ ಕಾರಣ.ಕಲಬುರ್ಗಿ ಅವರು ಕೇವಲ ವಿದ್ಯಾರ್ಥಿಗಳ ಅಧ್ಯಾಪಕರಾಗದೇ, ಪ್ರಾಧ್ಯಾಪಕರ ಪ್ರಾಧ್ಯಾಪಕರೆನಿಸಿಕೊಂಡಿದ್ದರು.

ಕಲಬುರ್ಗಿ ಅವರ ನೇಮಕಾತಿಗೆ ಒಂದರ್ಥದಲ್ಲಿ ಸಾತ್ವಿಕ ಪಟ್ಟು ಹಿಡಿದು ಕುಲಪತಿಗಳಾಗಿ ನೇಮಕವಾಗಲು ಪೂಜ್ಯರು ಕಾರಣರಾದರು.ಡಾ.ಕಲಬುರ್ಗಿ ಅವರಿಗೆ ಆ ಅರ್ಹತೆ ಇತ್ತು ಆದರೆ ಲಾಬಿ ಮಾಡಿ,ಅಧಿಕಾರಕ್ಕೆ ಬೆನ್ನು ಬೀಳುವ ವ್ಯಾಮೋಹ ಇರಲಿಲ್ಲ. ಅದನ್ನು ಮನಗಂಡ ಪೂಜ್ಯರು ವಿವಿಧ ರೀತಿಯಲ್ಲಿ ಪ್ರಯತ್ನ ಮಾಡಿ, ಯಶಸ್ವಿಯಾದರು.

ಎಂ.ಪಿ.ಪ್ರಕಾಶ ಮತ್ತು ಇತರ ಹಿರಿಯ ಅಧಿಕಾರಿಗಳ ಮೂಲಕ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮನವೊಲಿಸಿದರು.

ಅವರ ನಿರೀಕ್ಷೆಯಂತೆ ಕುಲಪತಿಗಳಾಗಿ ಡಾ.ಕಲಬುರ್ಗಿ ಅವರು ಅದ್ಭುತ ಕೆಲಸಗಳನ್ನು ಮಾಡಿ ಕನ್ನಡ ವಿಶ್ವವಿದ್ಯಾಲಯ ಘನತೆಯನ್ನು ಹೆಚ್ಚಿಸಿ ಸರ್ಕಾರದ ಗಮನ ಸೆಳೆದರು.ನಂತರ ಸರಕಾರ ವಿವಿಧ ಸಾಂಸ್ಕೃತಿಕ ಅಭಿವೃದ್ಧಿಯ ಸಂದರ್ಭದಲ್ಲಿ ಕಲಬುರ್ಗಿ ಅವರ ಮಾರ್ಗದರ್ಶನ ಪಡೆಯಿತು.ಒಂದು ವೇಳೆ ಅವರು ಕುಲಪತಿಗಳಾಗದಿದ್ದರೆ ನಾಡಿಗೆ ದೊಡ್ಡ ಹಾನಿಯಾಗುತ್ತಿತ್ತು ಅವರಿಗೆ ಅಲ್ಲ.

ಕುಲಪತಿಗಳಾಗಿ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗಲೂ ಮಠದ ಅಧ್ಯಯನ ಸಂಸ್ಥೆಯ ಮಾರ್ಗದರ್ಶನ ಮುಂದುವರೆಸಿಕೊಂಡು ಹೋದರು.

ತಮ್ಮ ಹಾಗೆ ಕೆಲಸ ಮಾಡುವ ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿದ್ದರು.ಆದರೆ ಕಲಬುರ್ಗಿಯವರ‌ ಸಾಮರ್ಥ್ಯದ ವಿಶಾಲತೆ ಅರಿತವರು ಆ ಸ್ಥಾನಕ್ಕೆ ಬರುವ ಧೈರ್ಯ ಮಾಡಲಿಲ್ಲ.ಹೀಗಾಗಿ‌ ಬದುಕಿನ ಕೊನೆಯ ಕ್ಷಣದವರೆಗೂ ತೋಂಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆ ಅವರ ಪ್ರಥಮ ಆದ್ಯತೆಯಾಗಿ ಉಳಿಯಿತು.

ಧಾರವಾಡದಲ್ಲಿ ಹಿರೇಮಲ್ಲೂರ ಈಶ್ವರನ್ ವಿಜ್ಞಾನ ಕಾಲೇಜು ಆರಂಭವಾಗಲು ಮಾರ್ಗದರ್ಶನ ನೀಡುವುದರ ಜೊತೆಗೆ, ಅದಕ್ಕೆ ಕ್ರಿಯಾಶೀಲ ಅಧ್ಯಾಪಕ ಶಶಿಧರ ತೋಡ್ಕರ್ ಅವರ ಹೆಗಲಿಗೆ ಜವಾಬ್ದಾರಿ ವಹಿಸಿ ಕಾಲೇಜಿನ ಉನ್ನತಿಗೆ ಪ್ರೇರಕರಾದರು.
ಅಂತರರಾಷ್ಟ್ರೀಯ ಸಮಾಜ ವಿಜ್ಞಾನಿ ಹಿರೆಮಲ್ಲೂರ ಈಶ್ವರನ್ ಪೂಜ್ಯರ ಸಾಮಾಜಿಕ ಕೆಲಸಗಳಿಂದ ಪ್ರೇರಿತರಾಗಿ ತಮ್ಮ ಬೆಲೆ ಬಾಳುವ ಮನೆಯನ್ನು ಮಠಕ್ಕೆ ದಾನ ಕೊಟ್ಟದ್ದನ್ನು ಡಾ.ಕಲಬುರ್ಗಿ ಅವರು ಸಾರ್ಥಕ ಗೊಳಿಸಿದರು.

ಲಿಂಗಾಯತರು ಹಿಂದೂಗಳಲ್ಲ ಎಂಬ ಡಾ.ಕಲಬುರ್ಗಿ ಅವರ ವಿಚಾರ ಧಾರೆಯನ್ನು ನಾಡಿನ ಉದ್ದಗಲಕ್ಕೂ ತಲುಪಿಸುವ ನೈತಿಕ ಜವಾಬ್ದಾರಿಯನ್ನು ಪೂಜ್ಯರು ಸಮರ್ಥವಾಗಿ ನಿರ್ವಹಿಸಿದರು.

ಅನೇಕ ವಿವಾದಗಳಿಗೆ ಕಲಬುರ್ಗಿಯವರು ಈಡಾದಾಗ ನೇರವಾಗಿ ಅವರ ಬೆಂಬಲಕ್ಕೆ ನಿಂತು ಅವರ ಅಭಿಪ್ರಾಯಗಳಿಗೆ ಗೌರವ ಕೊಟ್ಟು, ಅವರ ಆತ್ಮವಿಶ್ವಾಸಕ್ಕೆ ನೈತಿಕ ಬಲ ಹೆಚ್ಚಿಸಿದರು. ಕಲಬುರ್ಗಿಯವರು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಸ್ವತಃ ಇತರ ಲಿಂಗಾಯತ ಮಠಾಧೀಶರಿಗೆ ಇರಲಿಲ್ಲ ಆದರೆ ತೋಂಟದಾರ್ಯ ಮಠ ಸದಾ ಅವರ ಸಂಶೋಧನೆಗಳ ವಿಚಾರಧಾರೆಯನ್ನು ಒಪ್ಪಿಕೊಂಡು ಸಮಾಜಕ್ಕೆ ತಲುಪಿಸುವ ಕಾರ್ಯ ಮಾಡಿತು.

ಡಾ.ಎಂ.ಎಂ.ಕಲಬುರ್ಗಿ ಅವರ ಅಮಾನುಷ ಹತ್ಯೆಯಾದಾಗ ಪೂಜ್ಯರಿಗೆ ಸಹಿಸಲಾಗದ ಆಘಾತವಾಯಿತು. ಸತ್ಯವಂತ ಸಂಶೋಧಕರ ಹತ್ಯೆಯ ಭೀಕರತೆಯನ್ನು ಕರ್ನಾಟಕದ ನಾಗರಿಕ ಸಮಾಜ ಊಹಿಸಿರಲಿಲ್ಲ.

ಸಮಾಜೋ ಸಾಂಸ್ಕೃತಿಕ ಚಿಂತಕರ ಅಗಲಿಕೆಯಿಂದ ಪೂಜ್ಯರು ವಿಚಲಿತರಾಗಿ ಅದಕ್ಕೆ ಕಾರಣವಾದ ಬಲಪಂಥೀಯ ವಿಚಾರವಂತರ ಹುನ್ನಾರಗಳನ್ನು ನೇರವಾಗಿ ಖಂಡಿಸಿದರು.

ಅವರ ಹತ್ಯೆಯ ಮೂಲಕ ಸತ್ಯದ ಕತ್ತು ಹಿಚುಕುವ ಕುತಂತ್ರಕೆ ಶ್ರೀಗಳು ಬೆದರಲಿಲ್ಲ. ಕೊಲೆಯ ತನಿಖೆ ಚುರುಕು ಗೊಳಿಸಲು ಸರ್ಕಾರದ ಮೇಲೆ ಒತ್ತಡ ತಂದು ಅದಕ್ಕೊಂದು ತಾರ್ಕಿಕ ನೆಲೆ ಸಿಕ್ಕಾಗ ನಿಟ್ಟುಸಿರು ಬಿಟ್ಟರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ‌ ಡಾ.ಕಲಬುರ್ಗಿ ಅವರ ಹೆಸರಿನಲ್ಲಿ ಸಂಶೋಧನಾ ಪೀಠವನ್ನು ಸ್ಥಾಪಿಸಲು ಕಾರಣರಾದರು.

ಅದಕ್ಕಿಂತ ಮೊದಲು ತೋಂಟದಾರ್ಯ ಮಠದಲ್ಲಿ ಕಲಬುರ್ಗಿಯವರು ಸ್ಥಾಪಿಸಿದ್ದ ಲಿಂಗಾಯತ ಅಧ್ಯಯನ ಸಂಸ್ಥೆಯನ್ನು ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ ಎಂದು ಮರು ನಾಮಕರಣ ಮಾಡಿ ಅವರ ನೆನಪನ್ನು ಪುಸ್ತಕ ಲೋಕದ ಇತಿಹಾಸದಲ್ಲಿ ಚಿರಸ್ಥಾಯಿಗೊಳಿಸಿದರು.

ತಾಯಿಯನ್ನು ಕಳೆದುಕೊಂಡ ಮಗುವಿನ ಹಾಗೆ ಮನದಲ್ಲಿ ದುಃಖ ತುಂಬಿಕೊಂಡು ಅಜ್ಜಾ ಅವರು ಮಂಕಾಗಿ ಹೋದರು.
ಅಧ್ಯಯನ ಸಂಸ್ಥೆ ಅನಾಥವಾಗಿ ಹೋಯಿತು.
ಸೂಕ್ತ ವಾರಸುದಾರರ ನೇಮಕ ಸರಳ ಕೆಲಸವಲ್ಲ ಎಂಬ ಸತ್ಯ ಅರ್ಥವಾದಾಗ ಅಸಹಾಯಕರಾದರು.
ಅವರ ಮಾರ್ಗದರ್ಶನದ ಮಹಾ ಮಾರ್ಗದ ನೆನಹಿನಲ್ಲಿ ಕಟ್ಟುವ ಕಾರ್ಯ ಮುಂದುವರೆಯಿತು.

ಕಲಬುರ್ಗಿ ಅವರ ಸಂಶೋಧನಾ ಸಾಮರ್ಥ್ಯ, ಬದುಕು ಬರಹದ ಬೆಲೆಯನ್ನು ಸಮಾಜ ಇದ್ದಾಗ ಅರ್ಥ ಮಾಡಿಕೊಂಡು ಬೆಂಬಲಿಸಲಿಲ್ಲ‌ ಎಂಬ ಕೊರಗು ಸದಾ ಕಾಡುತ್ತಿತ್ತು.

ಆದರೆ ಸಾವಿನ ಕರಾಳತೆಯ ದುರುದ್ದೇಶವನ್ನು‌ ಇತರ ದೇಶದ ಸುದ್ದಿ ಮಾಧ್ಯಮಗಳು ಬಿತ್ತರಿಸಿ,ಬರೆದಾಗ ಡಾ.ಕಲಬುರ್ಗಿ ಅವರ ಬಸವ ಪ್ರಜ್ಞೆಯ ಹುತಾತ್ಮರಾದರು.

ಅವರ ಕೊಲೆ ಕೇವಲ ದೈಹಿಕ ಹತ್ಯೆ ಆದರೆ ವಿಚಾರಧಾರೆಯ ಮರು ಹುಟ್ಟು ಎಂಬ ಸತ್ಯವನ್ನು ಜಗತ್ತಿಗೆ ಅರ್ಥಮಾಡಿಸಿದರು.

ಪೂಜ್ಯರು ಕೊನೆ ಉಸಿರು ಇರುವವರಿಗೆ ಡಾ.ಕಲಬುರ್ಗಿಯವರ ಹೇಳಿದ ಸತ್ಯಗಳನ್ನು ಪ್ರತಿಪಾದಿಸುತ್ತಾ ದೇಹ ಬಿಟ್ಟರು.

ಈಗ ಗುರು-ಶಿಷ್ಯರ ದೈಹಿಕ ಅಗಲಿಕೆಯಿಂದ ನೈತಿಕ ಶಕ್ತಿ ಕಳೆದುಕೊಂಡು ಆ ಯಮ ಯಾತನೆಯಲ್ಲಿ ನಾವು ಇದ್ದು ಸತ್ತು ಹೋಗಿದ್ದೇವೆ.

ಸಿದ್ದು ಯಾಪಲಪರ್ವಿ ಗದಗ

______

2 thoughts on “ನಾಡಿನ ಬೌದ್ಧಿಕ ಚೇತನ: ಡಾ.ಎಂ.ಎಂ.ಕಲಬುರ್ಗಿ

Leave a Reply

Your email address will not be published. Required fields are marked *

error: Content is protected !!