ಯುವಕರ_ಐಕಾನ್_ತೇಜಸ್ವಿಯವರ_ಜನ್ಮದಿನ
“ನಾನು ವಿಜ್ಞಾನ ಪದವೀಧರನಲ್ಲ, ವಿಜ್ಞಾನಿಯೂ ಅಲ್ಲ, ನಾನು ಉಚ್ಚ ಶಿಕ್ಷಣವನ್ನು ಪಡೆದದ್ದು ಸಾಹಿತ್ಯದಲ್ಲಿ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತ-ಮುತ್ತಲ ವಿದ್ಯಮಾನಗಳನ್ನು ನೋಡುತ್ತಾ ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಬಂದೆ. ನಾನು ಕಂಡ ಪಶು, ಪಕ್ಷಿ, ಕ್ರಿಮಿ-ಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೇ ನಾನು ಅವುಗಳ ಬಗ್ಗೆ ಅಭ್ಯಾಸ ಮಾಡಿದವನು. ನಾನು ಜ್ಞಾನೋಪಾಸಕನಾಗಲೀ, ವಿದ್ವಾಂಸನಾಗಲೀ ಅಲ್ಲ. ಸಾಹಿತ್ಯವೇ ನನ್ನ ಸ್ವಧರ್ಮ. ಹಾಗಾಗಿ ಏನೂ ಬರೆದರೂ ಅದಕ್ಕೆ ಸಾಹಿತ್ಯದ ಪರಿವೇಷ, ಕಥೆ-ಕಾದಂಬರಿಗಳ ಛಾಯೆ ಇರುತ್ತದೆ’’ ಹೀಗೆ ಅನ್ನುತ್ತಲೇ ಕನ್ನಡ ನವ್ಯ ಸಾಹಿತ್ಯದಲ್ಲಿ ಅಚ್ಚಳಿಯದೆ ಉಳಿಯುವಂತಹ ಅದ್ಭುತ ಕೃತಿಗಳನ್ನು ರಚಿಸಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ.
ಲೋಹಿಯಾರ ಚಿಂತನೆ ಮತ್ತು ಶಿವರಾಮ ಕಾರಂತರ ಶೋಧನೆಯಿಂದ ತುಂಬಾನೇ ಪ್ರಭಾವಿತರಾಗಿದ್ದ ತೇಜಸ್ವಿ ಮಾತ್ರ ಮೂಡಿಗೆರೆಯ ಕಾಡಿನಲ್ಲಿ ಯಾವ ಪಂಗಡಕ್ಕೂ ಸೇರದೆ ಸ್ವತಂತ್ರವಾಗಿ ಬದುಕಿದರು. ತನಗೊಲಿದ ಸಾಹಿತ್ಯವನ್ನು ಯಾರನ್ನೂ ಮೆಚ್ಚಿಸಲೋ ಅಥವಾ ಟೀಕಿಸಲೋ ಬಳಸದೆ ತನ್ನ ಸುತ್ತ ಮುತ್ತಲ ಕೌತುಕಮಯ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾ ಅದನ್ನು ಜನರಿಗೆ ಸರಳವಾಗಿ ತಿಳಿಸಲು ಶ್ರಮಿಸಿದರು.
ಚೀಂಕ್ರ ಮೇಸಿ ಮಗ ಹಾವು ಮೀನಿಗೆ ಹೆದರಿ ಪ್ರಾಣ ಬಿಟ್ಟದ್ದನ್ನು ವಿಶ್ಲೇಷಿಸುತ್ತಾ ಕೊನೆಗೆ ಸರ್ಗಾಸೋ ಸಮುದ್ರವರೆಗೆ ಓದುಗರನ್ನು ಕರೆದೊಯ್ಯಬಲ್ಲ ಶಕ್ತಿ ತೇಜಸ್ವಿ ಬರಹದ್ದು. ಇದರಿಂದಲೇ ‘‘ನೀನು ಕುವೇಂಪುರವರಷ್ಟು ಎತ್ತರಕ್ಕೆ ಏರಲಾರೆ’’ ಎಂದು ವ್ಯಂಗ್ಯವಾಡಿದಾಗ ‘‘ಕುವೆಂಪು ನಾನು ಹೋದಷ್ಟು ಆಳಕ್ಕೆ ಹೋಗುವರೇ?’’ ಎಂದು ನಿರ್ಲಿಪ್ತವಾಗಿ ನುಡಿದವರು ತೇಜಸ್ವಿ.
ತೇಜಸ್ವಿ ಪ್ರೀತಿಸಿದ್ದು ಚಿತ್ರಕಲೆಯನ್ನು. ಇದಕ್ಕಾಗಿಯೇ ಅಂದಿನ ಮೈಸೂರು ಅರಮನೆಯ ಖ್ಯಾತ ಚಿತ್ರಕಾರರಾದ ಎಸ್.ಎನ್. ಸ್ವಾಮಿ, ತಿಪ್ಪೇಸ್ವಾಮಿ-ಮುಂತಾದವರಿಂದ ತರಬೇತಿ ಪಡೆಯುತ್ತಿದ್ದರು. ಆದರೆ ಕೊನೆಗೆ ಅದೆಲ್ಲೋ ತಾನು ಕಂಡದ್ದನ್ನು, ಅನುಭವಿಸಿದ್ದನ್ನು ಅನ್ಯರೊಂದಿಗೆ ಹಂಚಿಕೊಳ್ಳಲು ಅವರು ಬರೆಯಲು ಆರಂಭಿಸಿದರು. ಅವರ ಚಿತ್ರಕಲೆಯನ್ನು ಎಷ್ಟು ಮಂದಿ ಮೆಚ್ಚಿದ್ದಾರೋ ಗೊತ್ತಿಲ್ಲ, ಆದರೆ ಅವರ ಭಿನ್ನ ಶೈಲಿಯ ಬರವಣಿಗೆ ಸಾಹಿತ್ಯ ಲೋಕದಲ್ಲೊಂದು ನವ ಛಾಪನ್ನೆ ಒತ್ತಿಬಿಟ್ಟಿತು. ಅವರು ಬರೆದ ‘ಲಿಂಗ ಬಂದ’ ಸಣ್ಣ ಕತೆ ರಾಜ್ಯೋತ್ಸವ ಪ್ರಶಸ್ತಿ ಪಡೆಯಿತು. ಕಥೆಯನ್ನು ಮೆಚ್ಚಿದ ಅಡಿಗರು ‘”You will be our greatest prose” ಆದರೆ ಶಿವರಾಮ ಕಾರಂತರು“You are a greater writer than me” ಎಂದು ಪತ್ರ ಬರೆದರು !
ತಮ್ಮ ನಿರುತ್ತರ ನಿವಾಸದಲ್ಲಿ ಕುಳಿತುಕೊಂಡೇ ಅವರು ವಿಶ್ವದ ಅನೇಕ ವಿಸ್ಮಯಗಳಿಗೆ ಉತ್ತರ ಕಂಡುಕೊಳ್ಳುತ್ತಾ ‘ಮಿಲೇನಿಯಂ ಸರಣಿ’ಯ ಪುಸ್ತಕಗಳನ್ನು ಬರೆದು ಬಿಟ್ಟರು. 20ನೆ ಶತಮಾನದಲ್ಲಿ ವಿಶ್ವದಾದ್ಯಂತ ನಡೆದ ಅನೇಕ ಕೌತುಕಮಯ ವಿಷಯಗಳನ್ನು ಕನ್ನಡಿಗರಿಗೆ ಸರಳವಾಗಿ ಅರ್ಥೈಸುವಂತೆ ಮಾಡಿದ ಕೀರ್ತಿಗೆ ಪಾತ್ರರಾದರು. ಪಶ್ಚಿಮ ಘಟ್ಟದಲ್ಲಿ 24 ತಾಸಿ ನೊಳಗೆ ನಡೆಯುವ ಒಂದು ವಿಷಯವನ್ನು ಕೇಂದ್ರವಾಗಿರಿಸಿ ‘ಜುಗಾರಿ ಕ್ರಾಸ್’ ಎಂಬ ಕಾದಂಬರಿಯನ್ನು ಬರೆದರು. ಹಾರುವ ಹಳ್ಳಿಯ ಜಾಡು ಹುಡುಕುತ್ತಾ ಅವರು ಬರೆದ ‘ಕರ್ವಾಲೋ’ ಎಂಬ ಕಾದಂಬರಿ ತುಂಬಾನೇ ಪ್ರಸಿದ್ಧಿ ಪಡೆಯಿತು. ಇದು ಮಲಯಾಳಂ, ಜಪಾನಿ ಸೇರಿದಂತೆ ಹಲವಾರು ಭಾಷೆಗಳಿಗೂ ಭಾಷಾಂತರವಾಯಿತು. ಇವತ್ತಿಗೂ ಮತ್ತೆ ಮತ್ತೆ ಮುದ್ರಣಗೊಳ್ಳುತ್ತಿರುವ ಕನ್ನಡದ ಅದ್ಭುತ ಕೃತಿ. ತನ್ನ ಅಂಡಮಾನ್ ಪ್ರವಾಸ ಕಥನದ ಅನುಭವವನ್ನು ‘ಅಲೆಮಾರಿ ಅಂಡಮಾನ್’ನಲ್ಲಿ ಬಿಚ್ಚಿಟ್ಟರು.
ಅಲ್ಲಿಯವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ನೋಡದಂತಹ ಪ್ರವಾಸ ಕಥನ ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಯಿತು. ಆಂಡರ್ಸನ್ ಇಂಗ್ಲಿಷ್ನಲ್ಲಿ ಬರೆದ ಬೇಟೆಯ ಅನುಭವವನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಅದಕ್ಕೆ ಪ್ರಾದೇಶಿಕತೆಯ ಮೆರುಗನ್ನು ನೀಡಿದರು. ಇದೊಂದು ಕನ್ನಡ ಸಾಹಿತ್ಯ ವಲಯದಲ್ಲಿ ಭಿನ್ನ ಪ್ರಯತ್ನ ಎಂಬ ಪ್ರಶಂಸೆಗೆ ಪಾತ್ರವಾಯಿತು. ‘ಚಿದಂಬರ ರಹಸ್ಯ’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’… ಹೀಗೆ ಹಲವಾರು ಅದ್ಭುತ ಕೃತಿಗಳನ್ನು ಬರೆದರು. ಉತ್ಪ್ರೇಕ್ಷೆ ಅನಿಸದ ಪ್ರಶಂಸೆ, ದ್ವೇಷವಿಲ್ಲದ ವಿಮರ್ಶೆ, ದರ್ಪ ಅನಿಸದ ನಿಷ್ಠುರತೆ…ಇವು ತೇಜಸ್ವಿ ಬರಹದಲ್ಲಿ ಕಂಡು ಬರುವ ವೈಶಿಷ್ಟತೆಗಳು.
ಜೀವ ವೈವಿದ್ಯತೆಯಲ್ಲಿನ ಸೂಕ್ಷ್ಮತೆಯನ್ನು ಆಳವಾಗಿ ಅಧ್ಯಯನ ಮಾಡಿದ್ದ ತೇಜಸ್ವಿ, ಮನುಷ್ಯ ಸಂಬಂಧಗಳನ್ನು ಅಷ್ಟೇ ಕುತೂಹಲದಿಂದ ಸೂಕ್ಷ್ಮವಾಗಿ ಕಂಡವರು. ತನ್ನ ಸುತ್ತ-ಮುತ್ತ ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆ, ಮತೀಯವಾದದ ಬಗ್ಗೆ ಹಲವಾರು ಕೃತಿಗಳಲ್ಲಿ ವಿಶ್ಲೇಷಿದ್ದಾರೆ.
ಎಲ್ಲಾ ಸಾಹಿತಿಗಳು ನಗರದತ್ತ ಮುಖಮಾಡಿದರೆ ತೇಜಸ್ವಿ ಮಾತ್ರ ಮೂಡುಗೆರೆಯಲ್ಲಿ ‘ಕಾಡಿನ ಸಂತ’ನಾಗಿಯೇ ಉಳಿದು ಬಿಟ್ಟರು. ತೇಜಸ್ವಿ ಕ್ಯಾಮರಾ ಹಿಡಿದು ಪಶ್ಚಿಮ ಘಟ್ಟದ ದಟ್ಟ ಕಾನನದೊಳಗೋ ಅಥವಾ ಗಾಳ ಹಿಡಿದು ಗೌರಿ ಗುಂಡಿ ಕಡೆಗೋ ಹೊರಟರೆಂದರೆ ಅವರೊಬ್ಬ ಗಾಢ ತಪಸ್ವಿಯಾಗಿ ಪರಿವರ್ತನೆ ಗೊಳ್ಳುತ್ತಿದ್ದರು. ಅವರು ತೆಗೆದ ಜೀವ ಜಂತುಗಳ ಒಂದೊಂದು ೆಟೊಗಳೂ ಅವರ ಏಕಾಗ್ರತೆಯ, ತಪಸ್ಸಿನ ಪ್ರತಿ ಬಿಂಬಗಳು. ಅವರು ಪರಿಸರ ಪ್ರೇಮವನ್ನು ಕಂಡ ಕಂಬಾರರು ‘‘ನೀನು ಆಫ್ರಿಕಾದ ಕಾಡಿನಲ್ಲಿ ಹುಟ್ಟಬೇಕಿತ್ತು ಕಣಯ್ಯಿ’’ ಎಂದು ತಮಾಷೆ ಮಾಡುತ್ತಿದ್ದರಂತೆ.
ಎಷ್ಟೇ ಬರೆದರೂ, ಹೆಸರು ಪಡೆದರೂ ತೇಜಸ್ವಿ ಮಾತ್ರ ಸರಳ ವ್ಯಕ್ತಿಯಾಗಿಯೇ ಉಳಿದರು. ತಮ್ಮ ಸ್ಕೂಟರ್, ನೀರೆತ್ತುವ ಪಂಪು, ಕಂಪ್ಯೂಟರ್ ಕೈ ಕೊಟ್ಟಾಗಲೆಲ್ಲಾ ಸ್ವತಃ ರಿಪೇರಿ ಮಾಡುತ್ತಿದ್ದ ತೇಜಸ್ವಿಯಲ್ಲಿ ಸಾಧ್ಯವಾದಷ್ಟು ಎಲ್ಲವನ್ನೂ ಅರಿಯುವ ಹಸಿವಿತ್ತು. ಇದರಿಂದಲೇ ತೇಜಸ್ವಿ ಸಾಹಿತ್ಯಕಷ್ಟೇ ಸೀಮಿತವಾಗದೆ ಉಳಿದರು. ರೈತರಿಗೆ ಅನ್ಯಾಯವಾದಾಗ, ಅರಣ್ಯ ಸಂರಕ್ಷಣೆಯ ವಿಷಯ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿದರು.
ಇವತ್ತು ಕನ್ನಡದ ತಂತ್ರಾಂಶ ಈ ಮಟ್ಟಕ್ಕೆ ಬೆಳೆದಿದೆ ಅಂದರೆ ಅದರ ಹಿಂದೆ ತೇಜಸ್ವಿಯ ಕಾಣದ ಅಪಾರ ಶ್ರಮವೂ ಇದೆ. ಸಾಹಿತ್ಯವೆಂದರೆ ಕಬ್ಬಿಣದ ಕಡಲೆಯಾಗಬಾರದು; ಅದು ಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಇರಬೇಕು ಎಂದು ಬಯಸಿದ್ದವರು ಅವರು. ಯಾರೋ ಒಬ್ಬರು ಕಾರ್ಯಕ್ರಮವೊಂದರಲ್ಲಿ ಗ್ರಾಂಥಿಕವಾಗಿ ಮಾತನಾಡುವುದನ್ನು ಕಂಡು ‘‘ಸರಳವಾಗಿ ಜನರಿಗೆ ಅರ್ಥವಾಗುವ ಹಾಗೆ ಮಾತನಾಡಯ್ಯ’’ ಎಂದು ರೇಗಿದ್ದರು.
ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರೇ ಸ್ವತಃ ಅರವತ್ತು ರೂಪಾಯಿಗಳ ಡಿ.ಡಿ. ಕಳುಹಿಸಿ ತೇಜಸ್ವಿಯವರ ‘ಪರಿಸರದ ಕಥೆ’ ಪುಸ್ತಕ ಬಯಸಿ ಪ್ರಕಾಶಕರೊಬ್ಬರಿಗೆ ಪತ್ರ ಬರೆದಿದ್ದಾರೆ ಎಂದರೆ ತೇಜಸ್ವಿಯ ಬರಹಕ್ಕಿರುವ ಶಕ್ತಿ ಎಂತಹದ್ದು ಎಂದು ನಾವೇ ಊಹಿಸಬಹುದು! ಸೆಪ್ಟಂಬರ್ 8, 1938ರಲ್ಲಿ ಶಿವಮೊಗ್ಗ ಪರಿಸರದಲ್ಲಿ ಹುಟ್ಟಿದ ತೇಜಸ್ವಿ ಇಂದು ಬದುಕಿರುತ್ತಿದ್ದರೆ 82 ವರ್ಷಗಳಾಗುತ್ತಿತ್ತು. ಅವರಿಲ್ಲದಿದ್ದರೂ ಅವರು ಬರೆದಿರುವ ಅಸಂಖ್ಯಾತ ಅದ್ಭುತ ಕೃತಿಗಳು ಅವರನ್ನು ಸದಾ ಜೀವಂತವಾಗಿರುವಂತೆ ಮಾಡಿದೆ.
ಒಳ್ಳೆಯಚಿಂತನಾತ್ಮಕ ಬರಹ ಕುವೇಂಪುರವರಷ್ಟು ಎತ್ರಕ್ಕೆ ಹೊಗಬಲ್ಲಿರಾ ಎಂದಾಗ ನಿರ್ವಿಕಾರಭಾವದಿಂದ ಅವರು ನನ್ನಷ್ಟು ಆಳಕ್ಕೆ ಹೋಗುವರೆ?ಎಂದು ಕೆಳಿದ ಅವರದ್ವನಿ ಅವರ ಸಾಮರ್ಥ್ಯಕ್ಕಿಡಿದ ಕನ್ನಡಿಯಾಗಿದೆ .