ತೀರಾ ಇತ್ತೀಚೆಗೆ ನಾನು ತಾಯಿಯ ಆಸೆಯಂತೆ ಕಾಶಿಯ ವಿಶ‍್ವನಾಥನ ದರ್ಶನಕ್ಕೆ ಹೋಗುವ ಅನಿವಾರ್ಯತೆ ಉಂಟಾಯಿತು. ದೇವಸ್ಥಾನ, ದೇವರ ದರ್ಶನ ಎಂಬ ಸವಕಲು , ಅರ್ಥಹೀನ ಪದಗಳಿಂದ ಬಹುದೂರ ಇದ್ದವನು. ತಾಯಿಯ ಅಪೇಕ್ಷೆ ಪೂರೈಸಿದರಾಯಿತೆಂದು ಹೋದೆ.
ಅಲ್ಲಿ ಹೋದಾಗ ನಾನೂ ಎಲ್ಲರಂತೆ ದರ್ಶನಕ್ಕೆ ಕ್ಯೂ ನಿಲ್ಲುವ ಪ್ರಸಂಗ ಬಂತು. ಇದು ನನಗೆ ಬೇಸರ ಉಂಟು ಮಾಡಿತು. ಅಲ್ಲಿಯೇ ಸಿಕ್ಕ ದೇವರ ದರ್ಶನದ ದಲಾಲಿಯೊಬ್ಬ 2000/ರೂ ಕೊಟ್ಟರೆ ಸಾಕು. ಒಂದು ತಾಸಿನಲ್ಲಿಯೇ ದೇವರ ದರ್ಶನ (?) ಮಾಡಿಸುತ್ತೇನೆಂದ ! ನನಗೆ ಒಳಗೊಳಗೆ ನಗು 2000/ ರೂ ಕೊಟ್ಟರೆ ದೇವರನ್ನೂ ತೋರಿಸುವ ಫಟಿಂಗರು ಇದ್ದಾರಲ್ಲ ಎಂದು.
ಕ್ಯೂನಲ್ಲಿ ನಿಂತು ಒದ್ದಾಡುವುದು ಏಕೆಂದು, ಸರಿ ಹಾಗೂ ಹೀಗೂ ಚೌಕಾಶಿ ಮಾಡಿ 1100/ ರೂ ಗಳಿಗೆ ಗರ್ಭಗುಡಿಯಲ್ಲಿರುವ ಲಿಂಗವನ್ನು ತೋರಿಸಲು ಒಪ್ಪಿಕೊಂಡ. ಗುಡಿಯ ಒಳಗಡೆ ನನ್ನ ತಾಯಿಯನ್ನು ಕರೆದುಕೊಂಡು ಹೋಗಿ ಆ ಸ್ಥಾವರ ಲಿಂಗವನ್ನು ನೋಡಿಬಂದೆವು. ಮತ್ತೊಂದು ಸಂಗತಿ ಮರೆತೆ. ಗುಡಿಯೊಳಗೆ ಹೋಗುವುದಕ್ಕಿಂತ ಮುಂಚೆಯೆ ಗುಡಿಯ ಸುತ್ತ ಮುತ್ತಲಿರುವ ಅಂಗಡಿಯವರು ಅಕ್ಷರಶಃ ನಮಗೆ ಮುಗಿಬಿದ್ದರು. “ದೇವರ ದರ್ಶನಕ್ಕೆ ಹಾಗೆ ಹೋಗಲಾಗದು. ಆ ದೇವರಿಗೆ ಹಾಲಿನ ಅಭಿಷೇಕ ಮಾಡಬೇಕು” ಎಂದು ದುಂಬಾಲು ಬಿದ್ದು ಮಂಡಾಳದ ಚೀಟು, ಹಾಲಿನ ಬಟ್ಟಲಿರುವ ಬುಟ್ಟಿ ಕೈಯಲ್ಲಿ ಇಟ್ಟ. ಇಷ್ಟು ದೂರದವರೆಗೆ ಬಂದಿದ್ದೇವೆ. ಬರೀ ಐದಾರು ನೂರು ರೂಪಾಯಿಗೆ ಚೌಕಾಸಿ ಮಾಡಿದರೆ ಸರಿಯಾಗಲಿಕ್ಕಿಲ್ಲ,ಅಥವಾ ಅವ್ವನಿಗೆ ಮಾನಸಿಕವಾಗಿ ತೊಂದರೆಯಾಗಬಹುದೆಂದು ಎಣಿಸಿ, ತಕರಾರು ಮಾಡದೆ ಒಪ್ಪಿಕೊಂಡು ಒಳಹೋಗಿ ಬಂದೆವು.
ಹೊರ ಬಂದ ಮೇಲೆ ನಮ್ಮನ್ನು ಕರೆದುಕೊಂಡು ಹೋದ ಪುರೋಹಿತ ಜೊತೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತೆ. ಆ ಪುರೋಹಿತ
‘ನೀವು ಎಲ್ಲಿಂದ ಬಂದದ್ದು ?’
‘ಕರ್ನಾಟಕದಿಂದ ?’
‘ನೀವು ಯಾವ ಜನ ?’
‘ನಾವು ಲಿಂಗಾಯತ ಧರ್ಮಿಯರು’
‘ಅಂದರೆ ನೀವು ನಾಸ್ತಿಕರೆ ?’
‘ನಾವು ನಾಸ್ತಿಕರಲ್ಲ, ಇಷ್ಟಲಿಂಗವನ್ನು ಪೂಜಿಸುವವರು. ಬಸವಣ್ಣ ನಮ್ಮ ಧರ್ಮದ ಮೂಲ ಪುರುಷ’.
‘ನಾವು ನಮ್ಮ ಬ್ರಾಹ್ಮಣ ಧರ್ಮದಿಂದ ಹೊರ ಹಾಕಿದ್ದೇವೆ’
‘ಇಲ್ಲ, ಇಲ್ಲ, ಸ್ವತಃ ಬಸವಣ್ಣನವರೆ ಬ್ರಾಹ್ಮಣ ಧರ್ಮದಿಂದ ಹೊರಬಂದು ಲಿಂಗಾಯತವೆಂಬ ಧರ್ಮವನ್ನು ಕಟ್ಟಿದ್ದಾರೆ !’
ಎಂದು ಹೇಳಿದಾಗ ಆಸಾಮಿ ಉರಿದು ಹೋದ.
‘ನಿಮಗೆಲ್ಲ ದೇವರ ದರ್ಶನ ಮಾಡಿಸಿದ್ದೇನೆ. ಬ್ರಾಹ್ಮಣರ ಮೇಲೆ ನಂಬಿಕೆ ಇಲ್ಲದಿದ್ದರೆ ಈ ಹಣ ವಾಪಾಸು ಕೊಡುವೆ’ ಎಂದು ಹಣ ನನ್ನಿಂದ ಇಸಗೊಳ್ಳುವಾಗ ಹೇಳಿದ.
ನಾನು ಆ ಹಣ ಕೊಡೆಂದು ಕೈ ಚಾಚಿದೆ
ಆಗವನು “ಬ್ರಾಹ್ಮಣರ ಕೈಯಿಂದ ತಿರುಗಿ ಹಣ ಇಸಗೊಂಡರೆ ನಿಮಗೆ ಮೋಕ್ಷ ಸಿಗುವುದಿಲ್ಲ” ಎಂದು ಹೇಳುತ್ತ ತನ್ನ ಜೇಜಿಗೆ ಹಣ ಹಾಕಿಕೊಂಡು ಮತ್ತೊಂದು ಗಿರಾಕಿ ಹುಡುಕಿಕೊಂಡು ಹೊರಟ.
0 ಗುಂಡಣ್ಣ ಕಲಬುರ್ಗಿ, ಯಾದಗಿರ
ನಿಮ್ಮ ಅನುಭವ ಎಲ್ಲರ ಅನುಭವವು ಹೌದು. ಆದರೆ ಯಾರೊಬ್ಬರು ವೈಚಾರಿಕವಾಗಿ ಆಲೋಚಿಸಲಾರರು.