*ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಶರಣರ ಸ್ಮಾರಕಗಳ ರಕ್ಷಿಸಿರಿ*

*ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಶರಣರ ಸ್ಮಾರಕಗಳ ರಕ್ಷಿಸಿರಿ*

ಬಸವಣ್ಣನವರನ್ನು ಮಾದಲಾಂಬಿಕೆ ತಾಯಿ ಹೆತ್ತಿರಬಹುದು. ಆದರೆ ಆ ಕ್ರಾಂತಿ ಪುರುಷರನ್ನು ಕಾಪಿಟ್ಟು ಕಾಯ್ದು, ಮಟ್ಟಸ ಮಾಡಿದಾಕೆ, ಅಕ್ಕ ಅಕ್ಕನಾಗಮ್ಮ ತಾಯಿ. ಕ್ರಾಂತಿಯ ಗಂಗೋತ್ರಿ. ಲಿಂಗಾಯತರಿಗೆ ಇತಿಹಾಸದ ಪ್ರಜ್ಞೆ ಇಲ್ಲ. ಅವರು ಪುರಾಣ, ಶಾಸ್ತ್ರ, ಆಗಮಗಳ, ವೇದಗಳ ಭರಾಟೆಯಲ್ಲಿ ಮಿಂದೆದ್ದು ಹೋಗಿದ್ದಾರೆ.

ಇದಕ್ಕೆಲ್ಲ ಕಾರಣ ನಮ್ಮ ನಾಡಿನ ಬಹುತೇಕ ಮಠಗಳು, ಹಾಗೂ ಅಲ್ಲಿನ ಮಠಾಧಿಪತಿಗಳು ಎಂದು ನೇರವಾಗಿ ಆರೋಪಿಸುತ್ತಿದ್ದೇನೆ. ನನ್ನ ಮಾತುಗಳು ತುಂಬಾ ಕಟುವಾಗಿರಬಹುದು, ಆದರೆ ಅದರಲ್ಲಿ ಯಾವುದೆ ನಂಜಿಲ್ಲ.

ಕೆಲವು ಮಠಗಳು ಮಕ್ಕಳಿಗೆ ಶಿಕ್ಷಣ ಹಾಗೂ ದಾಸೋಹವನ್ನು ನೀಡಿವೆ. ಕರ್ನಾಟಕದ ಬಹುತೇಕ ಮಕ್ಕಳು ಮಠಗಳು ಇಲ್ಲದಿದ್ದರೆ ಅಶಿಕ್ಷಿತರಾಗಿ ಇರುತ್ತಿದ್ದರು. ಅವರೆಲ್ಲ ಉಳ್ಳವರ ಹೊಲ ಮನೆಗಳಲ್ಲಿ ಜೀತದಾಳಾಗಿರುತ್ತಿದ್ದರು. ಇದೆಲ್ಲ ಸತ್ಯ. ಬೆರಳೆಣಿಕೆಯ ಮಠಗಳು ಮಾಡಿದ ಶ್ಲಾಘನೀಯ ಕಾರ್ಯವನ್ನು ಇನ್ನುಳಿದ ಮಠಗಳು ತಾವು ಮಾಡಿದ ಸಾಧನೆ ಎಂಬಂತೆ ಅದರ ಲಾಭವನ್ನು ಪಡೆಯುತ್ತಿವೆ.

ಮೂರು ಸಾವಿರಕ್ಕೂ ಹೆಚ್ಚು ಇರುವ ಮಠಗಳು ಶರಣರ ಸಾಹಿತ್ಯ ಮತ್ತು ಅವರ ಐಕ್ಯ ಸ್ಳಳದ ಸ್ಮಾರಕದ ಬಗ್ಗೆ ದಿವ್ಯ ಅವಜ್ಞತೆ ಹೊಂದಿದ್ದಾರೆ. ಹಲವು ಮಠಗಳಲ್ಲಂತೂ ಮಠಾಧೀಶರು ಜಡಗಟ್ಟಿ ಹೋಗಿದ್ದಾರೆ. ಅಕ್ಷರಶಃ ಉಂಡುಂಡು ಮಲಗಿದ್ದಾರೆ. ಅವರನ್ನು ಹುಡುಕಿಕೊಂಡ ಭಕ್ತ(ಬಕರಾಗಳಿ) ಗೆ ಕಾಲು ಕೊಟ್ಟಿದ್ದಾರೆ. ತಮ್ಮ ಮೃತ ಹಸ್ತದಿಂದ ಹರಸಿದ್ದಾರೆ. ಬುದ್ದು ಭಕ್ತರು ಅದನ್ನೇ ಆಶೀರ್ವಾದ ಎಂದು ಹಿಗ್ಗಿ ಹಿರೇಕಾಯಿಯಾಗಿ ಮನೆಗೆ ಹೋಗಿದ್ದಾರೆ.

ಸರಕಾರಗಳು ಬದಲಾದಂತೆ ತಮ್ಮ ಮಠದ ಅಂಗಳ, ಹಿಂದಿನ ಸ್ವಾಮಿಗಳ ಗದ್ದುಗೆಯನ್ನು ರಿಪೇರಿ ಮಾಡಿಕೊಂಡು ಭರ್ಜರಿಯಾಗಿ ಸುಖಸಂಕಥಾ ಜೀವನ ನಡೆಸಿದ್ದಾರೆ. ವರ್ಷಕ್ಕೊಂದು ಜಾತ್ರೆ, ಜಮಾತೆ ಮಾಡಿಕೊಂಡು ಮಠದ ತುಂಬೆಲ್ಲ ಪವಡಿಸಿದ್ದಾರೆ. ಕೆಲವರಿಗೆ ಇದೆಲ್ಲ ಸಾಕಾಗಾದಾಗ ಮಠಕ್ಕೆ ಭಕ್ತರನ್ನು ಕರೆಸಿ ಮಡಿಲು, ಒಡಲು ತುಂಬಿದ್ದಾರೆ.

ಈ ಎಲ್ಲಾ ಆರೋಪಗಳನ್ನು ನಾನು ಪ್ರಜ್ಞಾ ಪೂರ್ವಕವಾಗಿ ಮಾಡಿದರೂ ಸಹ ಲಿಂಗಾಯತನು ಲಿಂಗಾಯತನ ಅವ ಗುಣಕ್ಕೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ ಎಂಬ ಮುತೂವರ್ಜಿಯಿಂದ.

ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಗಮನಿಸಿರಿ :

ತಾವು ವಾಸಿಸುವ ಜಿಲ್ಲೆ ತಾಲೂಕುಗಳಲ್ಲಿ ಶರಣರ ಸ್ಮಾರಕಗಳಿವೆ. ಶರಣರು ತಮ್ಮ ಪ್ರಾಣದ ಹಂಗು ತೊರೆದು ವಚನ ಸಾಹಿತ್ಯವೆಂಬ ಅಮೂಲ್ಯ ರತ್ನವನ್ನು ನಮಗಾಗಿ ಉಳಿಸಿ ಹೋಗಿದ್ದಾರೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಜೀವನ ಬದುಕಿ ಹೋಗಿದ್ದಾರೆ. ನಮ್ಮ ಹಾಗೂ ಭವಿಷ್ಯದ ಪೀಳಿಗೆಗೆ ವಚನಕಾರರ ಜೀವನ ಮಾರ್ಗದರ್ಶಿ. ಸ್ಮರಣೀಯ ಬಾಳು.

ಇದನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ ಚಿಕ್ಕಮಂಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಣ್ಣೆ ಹೊಳೆಯಲ್ಲಿ ಅಕ್ಕನಾಗಮ್ಮ ತಾಯಿಯ ಗದ್ದುಗೆಯನ್ನು ತೀರಾ ಇತ್ತೀಚೆಗೆ ಒಡೆದು ಹಾಕಿದ್ದಾರೆ. ನಮ್ಮ ಕಣ್ಣ ಮುಂದೆಯೆ ಸ್ಮಾರಕ ಭಗ್ನವಾಗಿ ಹೋಯ್ತು. ಸಾಣೆಹಳ್ಳಿಯ ಪಂಡಿತಾರಾಧ್ಯರು ಶಿವಾಚಾರ್ಯ ಸ್ವಾಮೀಜಿ, ಶ್ರೀ ಅರವಿಂದ ಜತ್ತಿಯವರು ಮುತುವರ್ತಿವಹಿಸದೆ ಹೋಗಿದ್ದರೆ ಅಲ್ಲಿ ಅಕ್ಕನಾಗಮ್ಮನ ಸಮಾಧಿ ಭೂಗರ್ಭ ದಲ್ಲಿ ಸೇರಿ ಹೋಗುತ್ತಿತ್ತು.

ಸರಕಾರವೂ ಸಹ ಕೆಲಸಕ್ಕೆ ಬಾರದವರ ಸ್ಮಾರಗಳಿಗೆ ಹಣ ಬಿಡುಗಡೆ ಮಾಡುತ್ತದೆ. ಮಠದ ನವೀಕರಣಕ್ಕೆ , ಕಲ್ಯಾಣ ಮಂಟಪಕ್ಕೆ ಸಾಕಷ್ಟು ದುಡ್ಡು ಕೊಡುತ್ತದೆ. ಅರ್ಥ ಪೂರ್ಣವಾದ ಸ್ಮಾರಕಗಳಿಗೆ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತದೆ‌. ಯಥಾ ಗುರು ತಥಾ ರಾಜಕಾರಣಿ ಎಂಬಂತೆ ಗುರುವರ್ಗದವನೂ ಸ್ವಾರ್ಥ ರಾಜಕಾರಣಿಯೂ ಸ್ವಾರ್ಥಿ ಎಂಬುದು ಸತ್ಯವಾಗಿರುವುದರಿಂದ ಯಾರು ಯಾರಿಗೆ ಹೇಳದ ಸ್ಥಿತಿ ನಿರ್ಮಾಣವಾಗಿದೆ.

ಪ್ರಜ್ಞೆ ಇರುವ ನಾಡಿನ ಮಠಾಧೀಶರಿಗೆ ಹೆಚ್ಚಿನ ಹೊಣೆ ಇದೆ. ಮಠಾಧೀಶರ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಇನ್ನಾದರೂ ತಮ್ಮ ಮಠದ ಅಭಿವೃದ್ಧಿಗಳನ್ನು ಬದಿಗೆ ಇರಿಸಿ ಶರಣರ ಸ್ಮಾರಕಗಳನ್ನು ಉಳಿಸಬೇಕು. ಕನಿಷ್ಠ ಶರಣರ ಚರಿತ್ರೆಯನ್ನಾದರೂ ಉಳಿಸಿರಿ. ವಚನಗಳನ್ನು ತಮ್ಮ ಮಠದ ವತಿಯಿಂದ ಪ್ರಕಟಿಸಲಿ. ಇದೆಲ್ಲ ಬದಿಗೊತ್ತಿ ತಮ್ಮ ಪಟ್ಟಾಧಿಕಾರದ , ಅರವತ್ತು ವರ್ಷ ಕಳೆದ ತಮ್ಮ ಜೀವನದ ಆಯುಷ್ಯವೆ ಬಹು ಶ್ರೇಷ್ಠ ಎನ್ನುವಂತೆ ಜನರ ರಕ್ತವನ್ನು ಹಿಂಡಿ ಹಿಪ್ಪೆ ಮಾಡಿ ದುಡ್ಡು ಎತ್ತುತ್ತಾರೆ. ಇವೆಲ್ಲ ಮಾಮೂಲಿ, ಇವನ್ನು ಒಂದೆರಡು ವರ್ಷ ಬದಿಗೆ ಇಟ್ಟು ಶರಣರ ಸ್ಮಾರಕದ ಕಡೆ ಗಮನ ನೀಡಲಿ ಎಂದು ಎಲ್ಲಾ ಬಸವ ಭಕ್ತ( ಪ್ರಜ್ಞಾವಂತ)ರ ಪರವಾಗಿ ವಿನಮ್ರವಾಗಿ ನಿವೇದಿಸುತ್ತೇನೆ.

ವಿಶ್ವಾರಾಧ್ಯ ಸತ್ಯಂಪೇಟೆ

5 thoughts on “*ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಶರಣರ ಸ್ಮಾರಕಗಳ ರಕ್ಷಿಸಿರಿ*

  1. ಮಲಗಿದವರನ್ನು ಬಡಿದೆಬ್ಬಿಸುವ ಸಮಯ ಬಂದಿದೆ. “ಮಾಡಿ ಇಲ್ಲವೆ ನಡಿ”ಎಂದು ನಾವು ಎಚ್ಚರಿಸಬೇಕಾಗಿದೆ. ತಮ್ಮಿಂದ ಪ್ರಾರಭವಾದಿದ್ದಕ್ಕೆ ಶರಣು ಶರಣಾರ್ತಿ.

  2. ಹುಟ್ಟಿನ ಲಿಂಗಾಯತದಿಂದ ಆಚರಣೆಯ ಲಿಂಗಾಯತ ಕಡೆಗೆ ಬಲವಾದ ಹೆಜ್ಜೆಯನ್ನು ಸಂವಿಧಾನ ಬಳಸಿಕೊಂಡು ಹೋಗುವ ಕೆಲಸವನ್ನು ಲಿಂಗವಂತರೆಲ್ಲಾ ಒಟ್ಟಾಗಿ ಮಾಡಬೇಕಿದೆ……ಶರಣರ ಐತಿಹ್ಯಗಳನ್ನು ರಕ್ಷಿಸುವ ಕೆಲಸ ಜನಾಂದೋಲನ ಆಗಬೇಕು.

  3. Yes what you are highlighting about the lethargy and indifference of the heads of Mutts is very true. Now we all take interest in saving the memorial places of 12 th century Sharanas not only for us but also for future generations as well. The heads of Mutts should take active role in restoration of sacred places of Sharana’s for the benefit of mankind.

  4. ಹೌದು ನಿಮ್ಮ ಲೇಖನ ಸತ್ಯವಾದುದು ಕೆಲವು ಮಠಾಧೀಶರು ತಮ್ಮ ತಮ್ಮ ಮಠಗಳನ್ನು ಉದ್ದಾರ ಮಾಡಿಕೊಳ್ಳುವುದರಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ ಯಾವ ರಾಜಕೀಯ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವುದಿಲ್ಲ ಏಕೆಂದರೆ ಅವರ ಕಡೆಯಿಂದ ಮಠಕ್ಕೆ ಬರುವ ದೇಣಿಗೆ ನಿಂತು ಹೋಗುತ್ತದೆ ಮಠಾಧೀಶ ರ ಕೆಲಸವೇನು ಸಮಾಜವನ್ನು ಭಕ್ತರನ್ನ ತಿದ್ದುವುದು ಮತ್ತು ಸಾಹಿತ್ಯಗಳ ಸಂರಕ್ಷಣೆ ಮಾಡುವುದು ಇನ್ನಾದರೂ ಸುಖ ಭೋಗದಲ್ಲಿರುವ ಮಠಾಧೀಶ ರ ಕರ್ತವ್ಯದ ಬಗ್ಗೆ ನಾವು ಎಚ್ಚರಿಸಬೇಕಿದೆ

Leave a Reply

Your email address will not be published. Required fields are marked *

error: Content is protected !!