*ವರದಿಗಾರರೆಂಬ ದುರಾತ್ಮರೂ ಹಾಗೂ ಚಿತ್ರದುರ್ಗದ ಶಿವಮೂರ್ತಿ ಸ್ವಾಮೀಜಿಯೂ*

*ವರದಿಗಾರರೆಂಬ ದುರಾತ್ಮರೂ ಹಾಗೂ ಚಿತ್ರದುರ್ಗದ ಶಿವಮೂರ್ತಿ ಸ್ವಾಮೀಜಿಯೂ*

ಒಂದು ಬರಹ ವ್ಯಕ್ತಿಯ ವ್ಯಕ್ತಿತ್ವವನ್ನು ಹನನ ಮಾಡಬಹುದು. ಅಥವಾ ಅವನನ್ನು ಹೊಗಳುವ ಮೂಲಕ ಆತನಿಗೆ ಶಕ್ತಿ ತುಂಬಬಹುದು. ಇದು ಎಲ್ಲರಿಗೂ ಗೊತ್ತಿರುವ ಪರಮ ಸತ್ಯ. ಈ ಸತ್ಯವನ್ನು ಅರಿತಿರುವ ರಾಜಕಾರಣಿಗಳು, ಮಠಾಧೀಶರು, ಬಂಡವಾಳಶಾಹಿ ಹಾಗೂ ಅಧಿಕಾರಿಗಳು ಪತ್ರಕರ್ತರನ್ನು ಓಲೈಸುತ್ತಿರುತ್ತಾರೆ. ತೀರಾ ಇತ್ತೀಚೆಗೆ ಮುಖ್ಯ ಮಂತ್ರಿಗಳ ಕಚೇರಿಯಿಂದ ಪತ್ರಿಕಾ ಕಚೇರಿಗೆ ಸರಕಾರಿ ವಾಹನದ ಮೂಲಕ ಏನು ಸರಬರಾಜು ಆಯಿತು ಎಂದು ಬಿಡಿಸಿ ಹೇಳಲಾರೆ.

ನಮ್ಮ ದೇಶದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸ್ವತಂತ್ರವಾಗಿದ್ದಷ್ಟು ಪ್ರಜಾಪ್ರಭುತ್ವದ ಬೇರುಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಪತ್ರಿಕೆಯ, ದೃಶ್ಯ ಮಾಧ್ಯಮದ ಕೆಲಸವೆಂದರೆ ಆಳುವ ಪಕ್ಷಕ್ಕೆ ಯಾವತ್ತೂ ಕೇಳುವ ( ವಿರೋಧ) ಪಕ್ಷವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅಲ್ಲಿ ಜನ ಸಾಮಾನ್ಯರು ಮುಕ್ತವಾಗಿ ಉಸಿರಾಡುತ್ತಾರೆ.

ಬದಲಾಗುತ್ತಿರುವ ಭಾರತೀಯರ ಮನಸ್ಥಿತಿಯ ಹಿನ್ನೆಲೆಯಲ್ಲಿ ನೋಡುವುದಾದರೆ ಪತ್ರಕರ್ತನೂ ಸಹ ಉದ್ಯಮಿಯಾಗಿದ್ದಾನೆ. ತಾನು ಹಾಕಿದ ಬಂಡವಾಳಕ್ಕೆ ಲಾಭವನ್ನು ನಿರೀಕ್ಷಿಸುತ್ತಿದ್ದಾನೆ. ಸಹಜವಾಗಿ ಹೇಳುವ,ಕೇಳುವ,ಜನತೆಗೆ ಎಚ್ಚರಿಸಬೇಕಾದ ಮಾಧ್ಯಮ ಮಕಾಡೆ ಮಲಗಿರುವಾಗ ಇನ್ನೆನು ಮಾಡಲು ಸಾಧ್ಯವಾಗುತ್ತದೆ ? ಒಲೆಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಬಹುದೆ ?

ಆದಾಗ್ಯೂ ಈ ಕಾಳ ರಾತ್ರಿ ನಡುವೆಯೂ ಅಲ್ಲಲ್ಲಿ ಒಬ್ಬೊಬ್ಬ ಪತ್ರಕರ್ತ ಎಚ್ಚರಿಕೆ ಬರವಣಿಗೆ ಮಾಡುತ್ತಿದ್ದಾನೆ. ಆತನ ಬರವಣಿಗೆ ಅರಣ್ಯರೋಧನವಾಗುತ್ತಿದೆ ಅನಿಸುತ್ತಿದೆಯಾದರೂ ಧಮನಿತರ,ಶೋಷಿತರ ಎದೆಯೊಳಗೆ ಭರವಸೆಯ ಬೆಳಕನ್ನು ಮೂಡಿಸುತ್ತಿದೆ. ಸಮಾಜದ ಭಾಗವಾಗಿರುವ ಪತ್ರಕರ್ತ ರಾಜಕಾರಣಿ, ಅಧಿಕಾರಿ, ಬಂಡವಾಳಶಾಹಿಯಂತೆ ಭ್ರಷ್ಟನಾಗಿದ್ದರೂ ಸಹ ಆತನ ಬಗೆಗಿನ ನಂಬಿಕೆಯನ್ನು ಜನತೆ ಸಂಪೂರ್ಣ ಕಳಕೊಂಡಿಲ್ಲ.

ಆದ್ದರಿಂದ ಮೂರ್ನಾಲ್ಕು ವರ್ಗದ ಜನ ಪತ್ರಕರ್ತರಿಗೆ ಹೆದರುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಬಗೆಗೂ ಭರವಸೆ ಹೊಂದಿದ್ದಾರೆ.

ಒಂದೆರಡು ದಿನಗಳ ಹಿಂದೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯ ಕುರಿತ ವರದಿಯೊಂದು ಇಂಗ್ಲೀಷ ದೈನಿಕ‌ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಅದನ್ನು ಅನುಸರಿಸಿ ಕನ್ನಡ ಹಲವು ಪತ್ರಿಕೆಗಳು ಬರೆದು ಬಿಟ್ಟವು. ಅವರು ಬರೆದ ವರದಿಯಲ್ಲಿ ತಪ್ಪೇನು ಇರಲಿಲ್ಲ, ಅಲ್ಲೂ ವಾಸ್ತವ ಸತ್ಯವೇ ಇತ್ತು. ಆದರೆ ಆ ಸತ್ಯ ಮಾತ್ರ ತಾಜಾ ಆಗಿರಲಿಲ್ಲ.‌

ಈ ವರದಿಯ ಹಿಂದೆ ಪ್ರಭಾವಿ ಸ್ವಾಮೀಜಿಯನ್ನು ಬಚಾವ ಮಾಡಬೇಕೆನ್ನು ಪ್ರಯತ್ನ ಇದ್ದದ್ದು ಯಾರಾದರೂ ಗಮನಿಸಬಹುದಿತ್ತು. ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ವೈದ್ಯರು ಆಗಸ್ಟ್‌ ೨೦೨೨ ರಲ್ಲಿ ನೀಡಿದ್ದ ವರದಿಯನ್ನು ಉಲ್ಲೇಖಿಸಿದ್ದರು. ಬಾಲಕಿಯ ಮೇಲೆ ಸಂಭೋಗವಾಗಿಲ್ಲ ಎಂದೇ ವಿವರಿಸಿ ೨ ನೇ ಹೆಚ್ಚುವರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಆದರೆ ಅದೆ ವರದಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್.ಎಸ್.ಎಲ್) ವರದಿ ಬರಬೇಕಿದ್ದು,ಅದಾದ ಬಳಿಕವಷ್ಟೇ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದ್ದರು.

ಒಬ್ಬ ವ್ಯಕ್ತಿಯ ಪರ ವಾಲಬೇಕೆಂದಿರುವ ವರದಿಗಾರ ಮುದ್ದಾಂ ಆಗಿಯೆ ಈ ಸಂಗತಿ ಮರೆಮಾಚಿರುವುದುದು ಸ್ಪಷ್ಟವಾಗಿದೆ. ಸಂತ್ರಸ್ತ ಮಕ್ಕಳ ಬಗೆಗೆ ತನಿಖಾ ವರದಿಯನ್ನು ಮಾಡಬಹುದಾಗಿದ್ದ ಪತ್ರಕರ್ತರು ಕೈಕಟ್ಟಿ ಕುಳಿತ್ತಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಅಪ್ಪಟ ಚಿನ್ನವಾಗಿದ್ದರೆ ಆ ಬಗೆಗೂ ಸವಿಸ್ತಾರದ ವರದಿ ಮಾಡಬೇಕಿತ್ತು.

ಇದನ್ನೆಲ್ಲ ಬಿಟ್ಟು ಜಾಣ ಕುರುಡು ಅನುಸರಿಸಿ ಜನತೆಯನ್ನು ತಪ್ಪು ದಾರಿಯ ಕಡೆ ನೋಡುವಂತೆ ಮಾಡಿದ ವರದಿಗಾರರ ಕ್ರಮ ಸಮರ್ಥನೀಯವಲ್ಲ.‌ ಹಾಗಂತ ಚಿತ್ರದುರ್ಗದ ಶಿವಮೂರ್ತಿ ಸ್ವಾಮೀಜಿಯ ವಿರುದ್ಧ ಷಡ್ಯಂತ್ರ ನಡೆದದೇ ಇಲ್ಲ ನಾನು ಹೇಳಲಾರೆ. ಅದು ಅಂಗೈ ಹುಣ್ಣಿಗೆ ಕನ್ನಡಿಯೆಂಬಂತೆ ಜನ ಸಾಮಾನ್ಯರೆಲ್ಲರಿಗೂ ಗೋಚರಿಸಿದೆ. ನ್ಯಾಯಾಲಯಕ್ಕೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಈಗಾಗಲೇ ಅದು ತನ್ನ ಒಂದು ಹೆಜ್ಜೆ ಇಟ್ಟಾಗಿದೆ.

ಈಗಾಗಲೆ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯ ವಿರುದ್ಧ ಪೋಕ್ಸೋ ಕಾಯ್ದೆ ೨೦೧೨ ರ ಕಲಂ ೧೭,೫(ಎಲ್),೬& ಭಾರತೀಯ ದಂಡ ಸಂಹಿತೆ ೧೮೬೦ ಕಲಂ ೩೭೬(೨),೩೭೬(ಡಿಎ) ೩೭೬(೩),೨೦೧,೨೦೨,೫೦೬ ರ ಜೊತೆಗೆ ಓದಿಕೊಳ್ಳಲಾಗುವ ೩೪,೩ ಹಾಗೂ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ೧೯೮೮ ರ ಕಲಂ೩ (ಎಫ್)’೭ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಇಂಚಿಂಚು ಸಂಗತಿ ಪತ್ರಕರ್ತರು ಬಲ್ಲರು. ಸಂಭೋಗ (ರೆಪ್) ಎಂದು ಕರೆಯುವಾವ ಪುರುಷನ ಜನನಾಂಗ ಸ್ತ್ರೀಯ ಜನನಾಂಗವನ್ನು ಪ್ರವೇಶಿಸಬೇಕೆಂಬುದೇನಿಲ್ಲ ಬರೀ ಸ್ಪರ್ಶಿಸಿದರೆ ಸಾಕು ಎಂಬ ನಿಯಮ ಗೊತ್ತಿಲ್ಲವೆ ? ಎನ್ನುತ್ತಾರೆ ತಜ್ಞ ನ್ಯಾಯವಾದಿಗಳು.

ಇಷ್ಟಾಗಿಯೂ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳಿಂದ ಹೊರಬರಲಿ. ತಾನು ಅಪ್ಪಟ ಚಿನ್ಹ ಎಂದು ನಿರೂಪಸಲಿ, ಯಾರು ಬೇಡ ಅನ್ನುತ್ತಾರೆ‌? ಕೂಸು ಹುಟ್ಟುವುದಕ್ಕಿಂತ ಮುಂಚೆಯೆ ಕುಲಾಯಿ ಹೊಲೆಸಲು ಹೊರಟ ಪತ್ರಕರ್ತರ ನಡತೆ ಪ್ರಜ್ಞಾವಂತರನ್ನು ಕಳವಳಕ್ಕೆ ಇಡುಮಾಡಿದೆ.

ಆದ್ದರಿಂದಲೆ ಸಿ.ಹೆಚ್.ಹನುಮಂತರಾಯಪ್ಪ, ಸಾಮಾಜಿಕ ಕಾರ್ಯಕರ್ತರಾದ ಮಲ್ಲಿಗೆ, ವಿಮಲಾ ಕೆ.ಎಸ್. , ಚಿಂತಕಿ ಡಾ.ಪದ್ಮಿನಿ ನಾಗರಾಜ ಮುಂತಾದವರು ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ವರದಿಗಾರ

2 thoughts on “*ವರದಿಗಾರರೆಂಬ ದುರಾತ್ಮರೂ ಹಾಗೂ ಚಿತ್ರದುರ್ಗದ ಶಿವಮೂರ್ತಿ ಸ್ವಾಮೀಜಿಯೂ*

  1. ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ says:

    ಸತ್ಯ

Leave a Reply

Your email address will not be published. Required fields are marked *

error: Content is protected !!