*ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಅಹಂ ಏನೆಲ್ಲ ದರ್ಪ ದೌರ್ಜನ್ಯದ ನಡೆಗೆ ಕಾರಣವಾಗುತ್ತಿದೆ*
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.
ಭಾರತೀಯ ಬಹುತೇಕರ ಮನಸ್ಥಿತಿ ಹೆಣ್ಣನ್ನು ಪೂಜ್ಯವಾಗಿ ಕಂಡರೂ ಸಹ, ಅವಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನೋಡಬಯಸುತ್ತದೆ. ಇದಕ್ಕೆ ಹಲವಾರು ಅಪದ್ಧ ಧಾರ್ಮಿಕ ಕಾರಣಗಳಿವೆ. ಮನುಸ್ಮೃತಿ ಎಂಬ ಕಳೆ ಬೆಳೆದ ನಾಡಿನಲ್ಲಿ ಇದೆಲ್ಲ ಮಾಮೂಲಿ. ಹೆಣ್ಣಾಗಲಿ ಗಂಡಾಗಲಿ ಎಲ್ಲಿ ಅಹಂಕಾರ ತುಂಬಿ ತೊನೆಯುತ್ತದೋ ಅಲ್ಲಿ ವಿವೇಕ ಗಾಳಿಯಲ್ಲಿ ತೂರಿ ಹೋಗುತ್ತದೆ. ಇಂಥ ತುರ್ಯಾವ ಸ್ಥಿತಿಯಲ್ಲಿ ಭಾರತ ಬಂಧಿಯಾಗಿದೆ.
ಇಂಥ ಸಂದರ್ಭದಲ್ಲಿ ಶರಣರ ಅನುಭಾವ ವಚನಗಳು ಮಾತ್ರ ಸಮಸ್ಯೆಗೆ ತಾತ್ವಿಕವಾದ, ನೈತಿಕ ವಾದ ಪರಿಹಾರವನ್ನು ಒದಗಿಸಬಲ್ಲುವು. ದೈಹಿಕವಾದ ಬದಲಾವಣೆಗಳಿಂದ ಮಾತ್ರ ಹೆಣ್ಣು ಗಂಡು ವಿಭಾಗಿಸಲಾಗಿದೆಯೆ ಹೊರತು, ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಅಹಂ ಏನೆಲ್ಲ ದರ್ಪ ದೌರ್ಜನ್ಯದ ನಡೆಗೆ ಕಾರಣವಾಗುತ್ತಿದೆ.
ಹೆಣ್ಣು ಹೀಗೆ ಇರಬೇಕು ಎಂದು ನಿರ್ಧರಿಸುವ ಮನಸ್ಥಿತಿ ಗಂಡಿಗೆ ಬಂದೊದಗಿದದ್ದು ದಾರಿದ್ರ್ಯವೆನ್ನಲೆಬೇಕಾಗಿದೆ. ತನ್ನ ಬುದ್ದಿಗೇಡಿತನವನ್ನು ಸಂಸದನೊಬ್ಬ ಹೆಣ್ಣು ಮಗಳೊಬ್ಬಳಿಗೆ ಹೇಳುವ ಮೂಲಕ ಇಡೀ ಗಂಡು ಸಮೂಹವನ್ನು ಅನುಮಾನಿಸಿ ನೋಡುವಂತೆ ಮಾಡಿದ್ದಾನೆ. ಜಗದ ಹಾಹೆ ( ಕಗ್ಬೊಂಬೆ) ಗೆ ಬಲಿಯಾದ ಸಂಸದನ ಮಾತು ನೀತಿಯ ಮಾತಲ್ಲ. ಅದು ಆತನ ಮನದ ವಿಕಾರ.
ಹೆಣ್ಣು ಮಗಳು ಕುಂಕುಮ ಇಟ್ಟುಕೊಂಡಿಲ್ಲ ಎಂದು ದರ್ಪದಿಂದ ಕೇಳಿದ ಈತ, ಆಕೆ ತನ್ನ ಹಸಿವಿಗೆ ಅನ್ನವನ್ನು ಹೇಗೆ ಸಂಪಾದಿಸುತ್ತಿದ್ದಾಳೆ. ನಿನ್ನ ಮಡಿಲಲ್ಲಿ ಹುಟ್ಟಿದ ಮಕ್ಕಳು ಏನು ಮಾಡುತ್ತಿದ್ದಾಳೆ ? ಎಂದು ಕೇಳಿದ್ದರೆ ಆ ಮಾತೆ ಬೇರೆ ಆಗುತ್ತಿತ್ತು. ಆದರೆ ಆ ಮನುಷ್ಯನಿಗೆ ಹೆಣ್ಣು ಕೇವಲ ಭೋಗದ ವಸ್ತು. ಆದ್ದರಿಂದಲೆ ಅವಳಲ್ಲಿ ಸೌಂದರ್ಯವರ್ಧಕ ಕುಂಕುಮ ಹುಡುಕಲು ಹೋದ. ಇದು ಬಲ್ಲವರ ನೀತಿಯಲ್ಲ ಎಂದು ವಚನಕಾರ್ತಿ ಸತ್ಯಕ್ಕ ಬಹಳಷ್ಟು ಕಾಲಗಳ ಹಿಂದೆಯೆ ಹೇಳಿದ್ದಾಳೆ.
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥಾ?
ಗಂಡು ಎಂಬ ದರ್ಪದ ಮನಸ್ಥಿತಿ ಇರುವವರಿಗೆ ಹೆಣ್ಣಿನ ಅಂತಃಕರಣ, ತಳಮಳ, ಪ್ರೀತಿ, ಕಕ್ಕುಲಾತಿ ಅರ್ಥವಾಗುವುದಾದರೂ ಹೇಗೆ ? ಹೆಣ್ಣು ಗಂಡು ಎಂಬ ದೈಹಿಕ ವ್ಯತ್ಯಾಸಗಳೆ ಪ್ರಮುಖವಾಗಿ ಜ್ಞಾನ ಗೌಣವಾಗುತ್ತದೆ ಎನ್ನುತ್ತಾಳೆ, ಶರಣೆ ಗೊಗ್ಗವ್ವೆ. ಏತರ ಹಣ್ಣಾದರೂ ಮಧುರವೆ ಪ್ರಮುಖ ಎಂದು ಇಂಥ ಬುದ್ದಿಗೇಡಿಗಳಿಗೆ ಗೊತ್ತಾಗುವುದಿಲ್ಲ.
ಬಹುಶಃ ಗಂಡ ಸತ್ತ ಮೇಲೆ ಹೆಣ್ಣು ಕುಂಕುಮ, ಬಳೆ, ಕಾಲುಂಗರ, ತಾಳಿ ತೆಗೆದು ಇಡಬೇಕು ಮನಸ್ಥಿತಿಯ ಹಿಂದೆ ಆತನ ಕಾಮದ ವಾಸನೆ ಇರಬೇಕೆನಿಸುತ್ತದೆ. ಹೆಣ್ಣು ತನ್ನ ಅಲಂಕಾರಕ್ಕಾಗಿ ಮುಡಿದುಕೊಳ್ಳುವ ಈ ಸಂಕೇತಗಳು ಇಲ್ಲವಾಗುತ್ತಲೆ ನಾಯಿಯಂತೆ ಜೊಲ್ಲು ಸುರಿಸುತ್ತ ಆ ಹೆಣ್ಣುಗಳ ಮೇಲೆ ಮುಗಿ ಬೀಳಬಹುದೆಂಬ ಧೂರ್ತ ಆಲೋಚನೆ ಇರುವಂತಿದೆ.
ಬಹುತೇಕ ಹೆಣ್ಣು ಮಕ್ಕಳು ಕುಂಕುಮವನ್ನು ತಮ್ಮ ಮುಖದ ಅಂದಕ್ಕಾಗಿ ಬಳಸಿಕೊಳ್ಳುತ್ತಾರೆ. ಅದು ಆಕೆಯ ಹಕ್ಕು. ಆ ಹಕ್ಕನ್ನು ಪ್ರಶ್ನಿಸುವ ಗಂಡು ತಾನು ಜನ್ಮವೆತ್ತಿದ್ದು ಸಹ ಒಬ್ಬ ತಾಯಿಯ ಮೂಲಕ ಎಂಬುದನ್ನು ಆತ ಮರೆಯುತ್ತಾನೆ. ಮದುವೆಯಾಗಿದ್ದರ ಸಂಕೇತ ತಾಳಿ, ಕುಂಕುಮ, ಬಳೆ , ಇತ್ಯಾದಿ ಅನ್ನುವುದಾದರೆ. ಗಂಡ ಸತ್ತ ಮೇಲೆ ಇವೆಲ್ಲ ತೆಗೆದು ಇಡಬೇಕು ಎಂದು ಹೇಳುವುದನ್ನು ಒಪ್ಪಿಕೊಳ್ಳಬಹುದಾಗಿದ್ದರೆ, ಗಂಡನ ಮೂಲಕವೆ ಹುಟ್ಟಿದ ಮಕ್ಕಳನ್ನು ಹೇಗೆ , ಎಲ್ಲಿ ತೆಗೆದು ಇಡಬೇಕು ? ಈ ಸೂಕ್ಷ್ಮ ಪ್ರಶ್ನೆಗೆ ಗಂಡಿನಲ್ಲಿ ಉತ್ತರಗಳಿಲ್ಲ.
ಹೆಣ್ಣಿನ ಸೂಕ್ಷ್ಮ ಮನಸ್ಥಿತಿ, ಗಂಡಿನ ಕಾಮದ ಕ್ರೌರ್ಯ ಅರಿತಿದ್ದ ಅಪ್ಪ ಬಸವಣ್ಣನವರು ಹೆತ್ತ ತಾಯಿ ನೀನೇ ಅವ್ವ ಎಂದು ತನ್ನಕ್ಕ ಅಕ್ಕನಾಗಮ್ಮನನ್ನು ಪ್ರೀತಿಯಿಂದ ಬಣ್ಣಿಸುತ್ತಾರೆ. ಅದಷ್ಟೆ ಅಲ್ಲದ ನೂರಾರು ಜನ ಪುಣ್ಯಾಂಗನೆಯರನ್ನು ಪಣ್ಯಾಂಗನೆಯರನ್ನಾಗಿ ಮಾಡುತ್ತಾರೆ. ಬಸವಣ್ಣನವರ ಅಭೂತಪೂರ್ವ ಚಿಂತನೆಗಳನ್ನು ಕಂಡ ಪುಣ್ಯಸ್ತ್ರೀ ಲಿಂಗಮ್ಮ ಇಂತಿವರ ಕಂಡೆನ್ನ ಕಂಗಳ ಮುಂದಿನ ಕತ್ತಲೆ ಹರಿಯಿತ್ತು.ಕಂಗಳ ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ ಮಹಾ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಎಂದು ಖುಷಿಯ ಉದ್ಘಾರ ತೆಗೆಯುತ್ತಾಳೆ.
ತಾಯಿಯೆಂದರಿಯ, ತಂಗಿಯೆಂದರಿಯ,
ಅತ್ತೆ ಅತ್ತಿಗೆಯೆಂದರಿಯ, ಸೊಸೆ ನಾದುನಿ ಮಗಳೆಂದರಿಯದೆ ಕಾಮುಕಗೊಂಡು ಬಂದಯೋನಿ ನಿಂದಹೊಟ್ಟೆ ತಿಂದಮೊಲೆಯೆಂಬುದನರಿಯದೆ ಬೀಳುವ ಶುನಿ ಸೂಕರ ಮಾನವಗೆ ಮಹೇಶ್ವರನೆಂದು ಶರಣ ಸಂಬಂಧಿಸಿದರೆ ನಾಯಕ ನರಕ ತಪ್ಪದು. ಅದು ಕಾರಣ ಬಿಟ್ಟು ಕಳೆವುದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರು.
ದೇಶಿಕೇಂದ್ರ ಸಂಗನ ಬಸವ ಶರಣರ ವಚನ ಅರ್ಥ ಮಾಡಿಕೊಂಡರೆ, ಗಂಡು ತಾನು ಗಂಡಾಗುಂಡಿಯಾಗಿ ಹೆಣ್ಣು ಮಕ್ಕಳ ಮೇಲೆ ಹುರಿದು ಮುಕ್ಕುವುದು ನಿಲ್ಲುತ್ತದೆ. ತಾಯಿಯ ಮೊಲೆ ತಿಂದ ಮೊಲೆಯೆಂಬುದನರಿಯದೆ ಬೀಳುವ ಶುನಿ ಸೂಕರ( ಹಂದಿ) ಗಳಿಗರ ನಾಯಕ ನರಕ ತಪ್ಪದು ಎನ್ನುತ್ತಾರೆ ಶರಣರು.
ಇವೆಲ್ಲವನರಿತು ಗಂಡು ಬದುಕಿದಾಗಲೆ ಆತನ ವ್ಯಕ್ತಿತ್ವಕ್ಕೊಂದು ಘನತೆ ಗೌರವ ಲಭ್ಯವಾಗುತ್ತದೆ. ಇಲ್ಲದಿದ್ದರೆ ಎಚ್ಚೆತ್ತ ಮಹಿಳಾ ಸಂಕುಲ ಗಂಡೆಂಬ ಅಹಂಕಾರಕ್ಕೆ ಬೆಂಕಿ ಇಕ್ಕುವ ಕಾಲ ದೂರವಿಲ್ಲ.
೦ ವಿಶ್ವಾರಾಧ್ಯ ಸತ್ಯಂಪೇಟೆ
ಹೆಣ್ಣು ಯಾವಾಗ ಸಬಲರಾಗಿ ತೋರುತ್ತಾಳೆಯೋ ಆಗ ಈ ವೈದಿಕ ಗಂಡಸರಿಗೆ ಎದೆ ಝಲ್ ಅನ್ನುತ್ತದೆ.
ಹೆಣ್ಣಿನಲ್ಲಿ ಸೌಂದರ್ಯವನ್ನು ಹುಡುಕುವ ಬದಲು ಅವಳಲ್ಲಿಯ ಜ್ಞಾನವನ್ನು ಗುರುತಿಸುವಂತಾದರೆ ಭಾರತ ಎಂದೋ ಭವ್ಯ ಭಾರತವಾಗುತ್ತಿತ್ತು.
ನಾಡು ನುಡಿಗೆ ನೆಲಕ್ಕೆ ಹರಿಯುವ ನೀರಿಗೆ ಸ್ತ್ರೀ ಸೂಚಕ ಹೆಸರನ್ನು ಇಟ್ಟು ಅವುಗಳ ತತ್ಸರೂಪಳಾದ ಹೆಣ್ಣು ಎದುರಿಗೆ ಬಂದಾಗ ಅವಳನ್ನು ಅಪಮಾನಿಸುವ ಅವಮಾನಿಸುವ ವ್ಯಕ್ತಿಯ ಹೃದಯದಲ್ಲಿ ಅದೆಷ್ಟು ಕೀಳು ವಿಚಾರಗಳಿವೆ ಎಂಬುದನ್ನು…. ಹಾಗೂ ಆತನಲ್ಲಿ ಎಷ್ಟು ಅಹಂಕಾರ ತುಂಬಿದೆ ದರ್ಪ ಅಡಗಿದೆ ಎಂಬುದು ತೋರಿಸಿಕೊಡುತ್ತದೆ. ಇಂಥವರು ಆಳುವ ದೊರೆಗಳಾದಾಗ ಸ್ತ್ರೀಯರಿಗೆ ಎಲ್ಲಿದೆ ಗೌರವ….? ಹೆಣ್ಣನ್ನು ಅಪಮಾನಿಸಿದ ಯಾರೇ ಆಗಲಿ ಕೂಡಲೇ ಕ್ಷಮೆ ಕೋರಬೇಕು. ಕಾನೂನಿನ ರೀತಿಯಲ್ಲಿ ಅಂತಹ ದುಷ್ಟರಿಗೆ ಶಿಕ್ಷೆ ಆಗಬೇಕು