*ಏನೂ ಇಲ್ಲದವರ ಪರವಾಗಿ ನಿಂತು ಮಾತನಾಡಿದವರು ಬಸವಣ್ಣನವರು*

*ಏನೂ ಇಲ್ಲದವರ ಪರವಾಗಿ ನಿಂತು ಮಾತನಾಡಿದವರು ಬಸವಣ್ಣನವರು*

ಶಹಾಪುರ : ೨೬ : ಆತ್ಮಸಾಕ್ಷಿಯನ್ನು ಮರೆತು ಬದುಕುವ ಕಾಲ ಘಟ್ಟದಲ್ಲಿ ನಾವಿಂದು ವಾಸಿಸುತ್ತಿದ್ದೇವೆ. ಬದುಕನ್ನು ನಮ್ಮ ದುರಾಶೆಗಳಿಗೆ ಕುಲಗೆಡಿಸಿಕೊಂಡಿರುವ ನಿಕೃಷ್ಟ ಸಂದರ್ಭದಲ್ಲಿ ಬಸವಾದಿ ಶರಣರ ವಚನಗಳು ನಮಗೆ ದಾರಿ ದೀಪವಾಗಬಲ್ಲವು ಎಂದು ಅನುಭಾವಿ ಅಜೇಂದ್ರ ಸ್ವಾಮೀಜಿ ನುಡಿದರು.

ನಗರದ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ , ಲಿಂ.ಅರವಿಂದರೆಡ್ಡಿ ರಡ್ಡೇರು ಅವರ ಸ್ಮರಣೆಯ ನಿಮಿತ್ತ ತಿಂಗಳ ಬಸವ ಬೆಳಕು -೧೦೬ ರ ಕಾರ್ಯಕ್ರಮದಲ್ಲಿ ಬೆಳೆವ ಭೂಮಿಯಲ್ಲೊಂದು ಪ್ರಳಯದ ಕಸ ಹುಟ್ಟಿ ಎಂಬ ವಿಷಯ‌ ಕುರಿತು ಮಾತನಾಡಿದರು.

ಜಗತ್ತು ಉಳ್ಳವರ, ಶ್ರೀಮಂತರ ,ಧಣಿಗಳ, ಪಟ್ಟಭದ್ರರ ಪರವಾಗಿದ್ದಾಗ ಬಸವಣ್ಣನವರು ಏನೂ ಇಲ್ಲದವರ ಪರವಾಗಿ ನಿಂತು ಮಾತನಾಡಿದರು. ಎನ್ನ ಕಾಲೇ ಕಂಬ . ದೇಹವೇ ದೇಗುಲ ಎನ್ನುವ ಮೂಲಕ ದೇವರುಗಳನ್ನ ದೇಹದಲ್ಲಿ ನೆಲೆಸುವಂತೆ ನೋಡಿಕೊಂಡರು. ಮನೆ ನೋಡಾ ಬಡವರು, ಮನ ನೋಡಾ ಘನ ಮನ ಸಂಪನ್ನ ಎನ್ನುತ್ತ ಹೃದಯ ಶ್ರೀಮಂತರ ಪರವಾಗಿ ಧ್ಚನಿ ಎತ್ತಿದ ಕ್ರಾಂತಿಕಾರಿ ಬಸವಣ್ಣನವರು.

ಇಂದಿಗೂ ವಚನ ಸಾಹಿತ್ಯ ಓದುವಾಗ ಒಳಗೊಳಗೆ ಚುಚ್ಚುತ್ತದೆ. ಆತ್ಮವಲೋಕನಕ್ಕೆ ಹಚ್ಚುತ್ತವೆ. ಸರಳ ಬಂಧದ,ಸುಲಿದ ಬಾಳೆ ಹಣ್ಣಿನಂದದಲ್ಲಿರುವ, ತಾಯಿಗೆ ಹಾಲು ಕುಡಿಸಿದಷ್ಡೆ ಅಪ್ಯಾಯಮಾನವಾಗಿರುವ ವಚನ ಸಾಹಿತ್ಯ ಓದುತ್ತಾ ಹೋದಂತೆ ನಮ್ಮೊಳಗಿನ ಅರಿವಿನ ಕ್ಯಾನವಾಸ ವಿಸ್ತರಿಸುತ್ತದೆ ಎಂದವರು ಪ್ರತಿಪಾದಿಸಿದರು.

ಭಕ್ತಿ ಪದವನ್ನು ಸರಿಯಾಗಿ ಗ್ರಹಿಸದ್ದರಿಂದ ಉಪಚಾರದ ನಡವಳಿಕೆಗಳು ಭಕ್ತಿ ಎನಿಸಿವೆ. ಹೂ,ಪತ್ರೆ,ಪುಷ್ಪ, ಅಗ್ಘವಣಿಗಳು ಪ್ರಮುಖವಾಗಿವೆ. ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿಕಾಡಿತ್ತು ಶಿವನ ಡಂಗುರ ಎಂಬುದು ಮರೆತದ್ದರಿಂದ ಭಕ್ತಿಗೆ ಅಪಚಾರವೆಸಗುತ್ತಿದ್ದೇವೆ ಎಂದು ವಿಷಾದಿಸಿದರು.

ತಿಂಗಳ ಬಸವ ಬೆಳಕು ಅಗ್ನಿಯ ಸಂಗದಿಂದ ಕಾನನ ಕೆಟ್ಟಂತೆ. ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ ಮನುಷ್ಯನ ಮೈಲಿಗೆ ತೊಳೆಯುವ ಕೆಲಸ ಮಾಡುತ್ತಿದೆ. ಸಂಗದಿಂದಲೇ ಮನುಷ್ಯ ಒಳ್ಳೆಯವನೂ ,ಕೆಟ್ಟವನೂ ಆಗಬಲ್ಲ. ನಿಮ್ಮ ಮನೆಯ ಮಕ್ಕಳಿಗೆ ವಚನ ಸಾಹಿತ್ಯವೆಂಬ ಹಾಲೂಟವನ್ನು ಉಣಿಸಿ ಎಂದು ನೆರೆದ ಸಭಿಕರಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾವಹಿಸಿ ಮಾತನಾಡಿದ ರಕ್ಷಿತಾ ಅರವಿಂದರಡ್ಡೇರು, ಮಹಿಳೆಯರ ಕುಲ ಸೂತಕವ ಕಳೆದಾತ ಬಸವಣ್ಣನವರು. ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದವರು, ಅವಳ ಹಕ್ಕುಗಳ ಜಗತ್ತಿನ ಮೊಟ್ಟ ಮೊದಲ ಪ್ರತಿಪಾದಕ ಬಸವಣ್ಣನವರು ಎಂದು ವಚಕಾರರ ಆಶಯಗಳ ವಿಹಂಗಮ ನೋಟವನ್ನು ಸಭಿಕರಿಗೆ ಕಟ್ಟಿಕೊಟ್ಟರು.

ಮುಡಬೂಳ ಗ್ರಾಮದ ಮಕ್ಕಳಿಂದ ಅನುಭವ ಮಂಟಪ ರೂಪಕ ನಡೆಯಿತು. ಇಟಗಿಯ ಪೂಜ್ಯ ಅನ್ನಪೂರ್ಣೆಶ್ವರಿ ತಾಯಿ ಹಾಗೂ ಸಂಗಡಿಗರಿಂದ ಅನುಭಾವದ ಹಾಡುಗಳನ್ನು ಹಾಡಲಾಯಿತು.

ಲಕ್ಷ್ಮಣ ಲಾಳಸೇರಿ ಸ್ವಾಗತ ಮಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು.ಷಣ್ಮುಖಪ್ಪ ಅಣಬಿ ವಂದನಾರ್ಪಣೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಶರಣಪ್ಒ ಸಲಾದಪುರ ವಹಿಸಿದ್ದರು.

ಸಭೆಯಲ್ಲಿ ಗುಂಡಪ್ಪ ತುಂಬಗಿ, ಅಡಿವೆಪ್ಪ ಜಾಕಾ, ವಿಶ್ವನಾಥರಡ್ಡಿ ಗೊಂದಡಗಿ, ಶಿವಯೋಗಪ್ಪ ಮುಡಬೂಳ, ಚಂದ್ರು ಕಟ್ಟಿಮನಿ, ವಿರೂಪಾಕ್ಷಿ ಸಿಂಪಿ, ಶರಣಪ್ಪ ಹುಣಸಗಿ ಕುಂಬಾರ, ಬಸವರಾಜ ಸಿನ್ನೂರು, ಸಿದ್ದಲಿಂಗಪ್ಪ ಆನೇಗುಂದಿ, ಶಹಾಪುರ, ಸುರಪುರ, ಮುಡಬೂಳ ಹಾಗೂ ಇಟಗಿ ಗ್ರಾಮದ ನೂರಾರು ಭಕ್ತರು ನೆರೆದಿದ್ದರು.

One thought on “*ಏನೂ ಇಲ್ಲದವರ ಪರವಾಗಿ ನಿಂತು ಮಾತನಾಡಿದವರು ಬಸವಣ್ಣನವರು*

Leave a Reply

Your email address will not be published. Required fields are marked *

error: Content is protected !!